ನಟ ದರ್ಶನ್ -ಇತರರನ್ನು ಬೇರೆ ಜೈಲಿಗೆ ಸ್ಥಳಾಂತರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾತ ಜೈಲಿನಲ್ಲಿರುವ ನಟ ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಾರಾಗೃಹದಲ್ಲಿರುವ ನಟ ದರ್ಶನಗೆ ರಾಜಾತಿಥ್ಯ ನೀಡಲಾಗುತ್ತಿರುವ ಫೋಟೋ ವೈರಲ್ ಆಗಿದ್ದು, ಅದು ಈಗ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಜೈಲಿನ ಅವ್ಯವಸ್ಥೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಂಡಾಮಂಡಲವಾದ್ದಾರೆ.

ಈ ವಿಚಾರವಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತಿತರರಿಗೆ ರಾಜಾತಿಥ್ಯ ನೀಡುತ್ತಿರುವ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.
“ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ಹಾಗೂ ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ” ಎಂದು ಅವರು ತಿಳಿಸಿದ್ದಾರೆ.

ನಟ ದರ್ಶನ್‌ಗೆ ಜೈಲಿನೊಳಗೆ ಸಿಗರೇಟ್ ಸೇದಲು ಮತ್ತು ಕಾಫಿ ಕುಡಿಯಲು ಅವಕಾಶ ನೀಡಿದ ಇಬ್ಬರು ಜೈಲರ್‌ಗಳು ಸೇರಿದಂತೆ ಏಳು ಸಿಬ್ಬಂದಿಯನ್ನು ಕಾರಾಗೃಹ ಇಲಾಖೆ ಅಮಾನತುಗೊಳಿಸಿದೆ ಎಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದರು.
ದರ್ಶನ್ ತಮ್ಮ ಬ್ಯಾರಕ್‌ನ ಹೊರಗೆ ಕುರ್ಚಿಯ ಮೇಲೆ ಕುಳಿತು ಒಂದು ಕೈಯಲ್ಲಿ ಸಿಗರೇಟ್ ಮತ್ತು ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದುಕೊಂಡು ಹರಟುತ್ತಿರುವ ರೀತಿಯ ಫೋಟೋ ಭಾನುವಾರ ವೈರಲ್ ಆಗಿತ್ತು. ನಂತರ ಇದು ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು.

ಪ್ರಮುಖ ಸುದ್ದಿ :-   ಕಡೂರು| ದುಷ್ಕರ್ಮಿಗಳಿಂದ ಹಸುವಿನ ಕೆಚ್ಚಲು ಕತ್ತರಿಸಿ ಕ್ರೌರ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement