ಬೆಂಗಳೂರು : ಮಾಜಿ ಸಚಿವ, ಶಿವಮೊಗ್ಗ ಹಾಗೂ ಸಾಗರ ಕ್ಷೇತ್ರದ ಮಾಜಿ ಶಾಸ ಕೆ.ಎಚ್. ಶ್ರೀನಿವಾಸ (86) ನಿಧನರಾಗಿದ್ದಾರೆ.
ಸಾಗರ ತಾಲ್ಲೂಕು ಕಾನುಗೋಡು ಗ್ರಾಮದವರಾದ ಶ್ರೀನಿವಾಸ ಅವರು ಮೊದಲು ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದರು. ಆನಂತರ ಆನಂತರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಲ್ಲಿಯೂ ಇದ್ದರು.. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಆಪ್ತರಾಗಿದ್ದ ಅವರು ಸಾಂಸ್ಕೃತಿಕ ವಲಯದಲ್ಲೂ ಗುರುತಿಸಿಕೊಂಡಿದ್ದರು. ಕವನ ಸಂಕಲನಗಳನ್ನೂ ರಚಿಸಿದ್ದ ಅವರು ಸಿನಿಮಾದಲ್ಲೂ ಅಭಿನಯಿಸಿದ್ದರು. ಮೃತರು ಪತ್ನಿ ಹಾಗೂ ಕವಯಿತ್ರಿ ಮತ್ತು ಲೇಖಕಿ ಶಾಲಿನಿ ಶ್ರೀನಿವಾಸ, ಓರ್ವ ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾನುಗೋಡು ಗ್ರಾಮದಲ್ಲಿ 1938ರ ಫೆಬ್ರವರಿ 5ರಂದು ಜನಿಸಿದ ಶ್ರೀನಿವಾಸ ಸಾಗರ, ಶಿವಮೊಗ್ಗದಲ್ಲಿ ಶಿಕ್ಷಣ ಪಡೆದಿದ್ದರು. ಕೃಷಿಕರಾಗಿ, ವಕೀಲರಾಗಿದ್ದುಕೊಂಡೇ ರಾಜಕೀಯ ಪ್ರವೇಶಿಸಿದ್ದರು.
ಶ್ರೀನಿವಾಸ ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದರು ಮತ್ತು ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಪಡೆದರು. ಮೈಸೂರಿನ ಶಾರದಾ ಕಾಲೇಜಿನಲ್ಲಿ ಕಾನೂನು ಪದವಿಯನ್ನೂ ಪಡೆದರು. ಅವರು ಕಾನೂನು ವೃತ್ತಿಯನ್ನು ಮುಂದುವರಿಸುವ ಮೊದಲು ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಕಾಲ ಕೆಲಸ ಮಾಡಿದರು. ಮಲೆನಾಡು ಪ್ರದೇಶದ ಜನರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸುವ ಉತ್ಸಾಹದಿಂದ ಅವರು ಸಾಗರ ಪ್ರಾಂತೀಯ ವಿದ್ಯಾವರ್ಧಕ ಸಂಘದ ಮೊದಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ನಂತರ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದರು. ಹೈಕೋರ್ಟ್‌ನಲ್ಲಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು.ಬರಹಗಾರ, ಸಂಗೀತ ಹಾಗೂ ಯಕ್ಷಗಾನ ಪ್ರೇಮಿ, ಪ್ರಚಂಡ ವಾಗ್ಮಿಯಾಗಿದ್ದ ಶ್ರೀನಿವಾಸ ಐದು ಪುಸ್ತಕಗಳನ್ನು ರಚಿಸಿದ್ದಾರೆ.
ರಾಜಕೀಯ ಪಯಣ…
ಶ್ರೀನಿವಾಸ ಅವರು 1967 ರಲ್ಲಿ ಸಾಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ತಮ್ಮ ಪ್ರಬಲ ಪ್ರತಿಸ್ಪರ್ಧಿ ಕಾಗೋಡು ತಿಮ್ಮಪ್ಪ ಅವರನ್ನು 700 ಮತಗಳಿಂದ ಸೋಲಿಸಿದರು. ಅವರು 1974 ರಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ್ ಅರಸು ಅವರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1978 ರಲ್ಲಿ ಅವರು ಶಿವಮೊಗ್ಗ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು ಮತ್ತು ಅರಸು ಸಂಪುಟದಲ್ಲಿ ವಾರ್ತಾ ಮತ್ತು ಇಂಧನ ಸಚಿವರಾದರು. 1985 ರಲ್ಲಿ ಶಿವಮೊಗ್ಗ ಶಾಸಕರಾಗಿ ಪುನರಾಯ್ಕೆಯಾದರು ಆದರೆ 1989 ಮತ್ತು 1994 ರ ಚುನಾವಣೆಯಲ್ಲಿ ಪರಾಭವಗೊಂಡರು. 1996ರಿಂದ 2002ರವರೆಗೆ ವಿಧಾನಪರಿಷತ್ ಸದಸ್ಯರಾಗಿ, ಪರಿಷತ್ ವಿಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. 2004ರಲ್ಲಿ ಶಿವಮೊಗ್ಗ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ