ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಜಗಳ ನಡೆದಿದೆ ಎಂದು ವರದಿಯಾಗಿದೆ. ಸಭೆಯಲ್ಲಿ ಮಾಜಿ ಶಾಸಕ ಸುನಿಲ ಹೆಗಡೆ ಬಣ ಹಾಗೂ ಜಿಲ್ಲಾ ಕಾರ್ಯದರ್ಶಿ ಶಿವಾಜಿ ನರಸಾನಿ ಗುಂಪಿಗಳ ಮಧ್ಯೆ ಗಲಾಟೆಯಾಗಿದೆ.
ಹಳಿಯಾಳದ ಗಣೇಶ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧ್ಯಕ್ಷ ಎನ್. ಎಸ್. ಹೆಗಡೆ ಕರ್ಕಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಸದಸ್ಯತ್ವ ಅಭಿಯಾನದ ಕುರಿತು ಸಭೆಯಲ್ಲಿ ಚರ್ಚೆಯಾಗಬೇಕಿತ್ತು. ಈ ವೇಳೆ ಹಳಿಯಾಳದಲ್ಲಿ ಬಿಜೆಪಿಯಲ್ಲಿ ಎರಡು ಬಣಗಳ ನಡುವೆ ಜಗಳ ತೀವ್ರಗೊಂಡು ಹೊಡೆದಾಡುವ ಹಂತ ತಲುಪಿತು.
ಬಿಜೆಪಿ ಸಭೆಗೆ ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಶಿವಾಜಿ ನರಸಾನಿ ಬರುತ್ತಿದ್ದಂತೆ, ಶಿವಾಜಿ ನರಸಾನಿ ಸಭೆಗೆ ಯಾಕೆ ಬಂದಿದ್ದಾರೆ ಎಂದು ಸುನಿಲ ಹೆಗಡೆ ಬಣದವರು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಎರಡು ಬಣದವರ ಜಗಳ ವಿಕೋಪಕ್ಕೆ ಹೋಗಿ, ಶಿವಾಜಿ ನರಸಾನಿ ಅವರನ್ನು ಮಾಜಿ ಶಾಸಕ ಸುನೀಲ ಹೆಗಡೆ ಬಣದವರು ಎಳೆದಾಡಿದ್ದಾರೆ ಎಂದು ಹೇಳಲಾಗಿದೆ. ಗಣೇಶ ಕಲ್ಯಾಣ ಮಂಟಪದ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ