ಅಧಿಕಾರಿ ಅಮಾನತಿನಿಂದ ಮುಡಾ ನಿರ್ಣಯ ತಪ್ಪೆಂಬುದು ಸಾಬೀತು ; ರವಿಕುಮಾರ

ಬೆಂಗಳೂರು : ಅಕ್ರಮವಾಗಿ ನೀಡಲಾದ ಮೈಸೂರು ಮುಡಾದ 14 ನಿವೇಶನಗಳನ್ನು ವಾಪಸ್ ಮಾಡಬೇಕು ಹಾಗೂ ಅಕ್ರಮದ ಆ ತಪ್ಪಿಗೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಮ್ಮ ಕಾನೂನು, ನಿಯಮ, ನಿರ್ದೇಶನಗಳಿಗೆ ಅವರು ವಿರುದ್ಧವಾಗಿ ವರ್ತಿಸಿದ್ದರು ಎಂಬ ಕಾರಣಕ್ಕೆ ಹಿಂದಿನ ಮುಡಾ ಆಯುಕ್ತ ದಿನೇಶಕುಮಾರ ಅವರನ್ನು ಅಮಾನತು ಮಾಡಿದ್ದಾರೆ. ಈ ಮೂಲಕ ಮುಡಾದ ನಿರ್ಣಯಗಳು, ನಿರ್ದೇಶನಗಳು, ನಿರ್ಧಾರಗಳು ತಪ್ಪಾಗಿದೆ ಎಂದು ಸರ್ಕಾರ ಒಪ್ಪಿಕೊಂಡಂತಾಗಿದೆ ಎಂದು ಅವರು ವಿಶ್ಲೇಷಿಸಿದರು.

ಮುಖ್ಯಮಂತ್ರಿಗಳಿಗೆ ಬಹಳ ದೊಡ್ಡ ಮಟ್ಟದಲ್ಲಿ ಬೆಲೆಬಾಳುವ ನಿವೇಶನಗಳಿರುವ ಬಡಾವಣೆಯಲ್ಲಿ ಸೈಟ್‌ಗಳನ್ನು ನೀಡಲಾಗಿದೆ. ಚದರಡಿಗೆ 1 ಸಾವಿರ ರೂ. ಸಿಗುವ ಜಾಗ ಬಿಟ್ಟು ಚದರಡಿಗೆ 10 ಸಾವಿರದಿಂದ 12 ಸಾವಿರ ರೂ.ಗೆ ಇರುವ ಪ್ರದೇಶದಲ್ಲಿ ಅಕ್ರಮವಾಗಿ ಸೈಟ್ ಪಡೆಯಲಾಗಿದೆ. ದಿನೇಶಕುಮಾರ ಅಮಾನತು ತಮಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಮೈಸೂರು ಮುಡಾದ ಅಕ್ರಮ ಸಂಬಂಧದಲ್ಲೇ ಅಧಿಕಾರಿ ಅಮಾನತಾಗಿದ್ದಾರೆ. ದಿನೇಶಕುಮಾರ ಅಮಾನತು ತಮಗೆ ಗೊತ್ತಿಲ್ಲ ಎಂದು ಹೇಳಿರುವುದು ಜನರನ್ನು ಮೂಢರನ್ನಾಗಿ ಮಾಡುವಂಥದ್ದು ಎಂದು ಟೀಕಿಸಿದರು.

ಪ್ರಮುಖ ಸುದ್ದಿ :-   ಬೆಳಗಾವಿ | ಮಸೀದಿಯಲ್ಲಿದ್ದ ಕುರಾನ್ ಕದ್ದೊಯ್ದು ಸುಟ್ಟು ಹಾಕಿದ ಕಿಡಿಗೇಡಿಗಳು ; ಪ್ರತಿಭಟನೆ

ಮುಖ್ಯಮಂತ್ರಿಗಳು ಇನ್ನೂ ಯಾಕೆ ನ್ಯಾಯಾಲಯದ ತೀರ್ಪನ್ನು ಕಾಯುತ್ತಿದ್ದಾರೆ? ಅವರಿಗೆ ಆತ್ಮಗೌರವ ಇದ್ದರೆ, ಕಾನೂನು, ನಿಯಮ, ಸಂವಿಧಾನದ ಕುರಿತು ಗೌರವ ಇದ್ದರೆ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ಕೊಡಬೇಕು. ಅದಕ್ಕಿಂತ ಮೊದಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement