ಮುಂಬೈ: ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅಭಿನಯದ ʼಎಮೆರ್ಜೆನ್ಸಿʼ ಚಿತ್ರದ ಸೆನ್ಸಾರ್ ಪ್ರಮಾಣಪತ್ರವನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಆದೇಶ ನೀಡಲು ಬಾಂಬೆ ಹೈಕೋರ್ಟ್ ಬುಧವಾರ ನಿರಾಕರಿಸಿದೆ.
ಇದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ಜಾರಿಗೆ ತರಲಾಗಿದ್ದ 1975ರ ತುರ್ತು ಪರಿಸ್ಥಿತಿ ಹಿನ್ನೆಲೆಯಾಗಿರಿಸಿಕೊಂಡು ನಿರ್ಮಾಣ ಮಾಡಿದ ಚಲನಚಿತ್ರವಾಗಿದೆ.
ಸಂಬಂಧಿತ ಪ್ರಕರಣವೊಂದರಲ್ಲಿ ಸಿನಿಮಾಕ್ಕೆ ಇನ್ನೂ ಅಂತಿಮ ಪ್ರಮಾಣಪತ್ರ ನೀಡಿಲ್ಲ ಮತ್ತು ಸಿನಿಮಾಟೋಗ್ರಾಫ್ ಕಾಯಿದೆ ಮತ್ತು ಉಳಿದ ನಿಯಮಾವಳಿಯನುಸಾರ ಅದು ಇನ್ನೂ ಪರಿಶೀಲನೆಗೆ ಒಳಗಾಗುತ್ತಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಮಧ್ಯಪ್ರದೇಶ ಸರ್ಕಾರಕ್ಕೆ ತಿಳಿಸಿದೆ ಎಂಬುದನ್ನು ನ್ಯಾಯಮೂರ್ತಿಗಳಾದ ಬಿ ಪಿ ಕೊಲಬವಾಲಾ ಮತ್ತು ಫಿರ್ದೋಶ್ ಪಿ ಪೂನಿವಾಲಾ ಅವರಿದ್ದ ಪೀಠ ಗಮನಿಸಿತು.
ಚಿತ್ರದ ಸೆನ್ಸಾರ್ ಪ್ರಮಾಣಪತ್ರದ ಭೌತಿಕ ಪ್ರತಿಯನ್ನು ಬಿಡುಗಡೆ ಮಾಡಲು ಸಿಬಿಎಫ್‌ಸಿಗೆ ಬಾಂಬೆ ಹೈಕೋರ್ಟ್ ಸೂಚಿಸಿದರೆ ಅದು ಮಧ್ಯಪ್ರದೇಶ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸುವುದಿಲ್ಲ ಎಂದು ಚಿತ್ರದ ನಿರ್ಮಾಪಕರು ವಾದಿಸಿದರು.
ಆದರೆ ಈ ವಾದದಿಂದ ಸಂತುಷ್ಟವಾಗದ ನ್ಯಾಯಾಲಯವು ಆದೇಶ ನೀಡಲು ನಿರಾಕರಿಸಿತು. ನಿರ್ಮಾಪಕರ ಅರ್ಜಿ ವಿಲೇವಾರಿ ಮಾಡದ ನ್ಯಾಯಾಲಯ, ಸೆಪ್ಟೆಂಬರ್ 18 ರೊಳಗೆ ಚಿತ್ರದ ವಿರುದ್ಧದ ಆಕ್ಷೇಪಣೆ ಪರಿಗಣಿಸಿ ಪ್ರಮಾಣಪತ್ರ ವಿತರಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಿಬಿಎಫ್‌ಸಿಗೆ ಸೂಚಿಸಿದೆ.
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಪ್ರಮಾಣಪತ್ರ ನೀಡುವುದು ತಡವಾಗುತ್ತದೆ ಎಂದು ಸಿಬಿಎಫ್‌ಸಿ ಹೇಳುವಂತಿಲ್ಲ ಚಲನಚಿತ್ರ ನಿರ್ಮಾಣಕ್ಕೆ ಸಾಕಷ್ಟು ಹಣ ವಿನಿಯೋಗ ಮಾಡಿರುವುದರಿಂದ ಚಿತ್ರ ಬಿಡುಗಡೆಗೆ ಅನಗತ್ಯ ವಿಳಂಬ ಮಾಡಬಾರದು ಎಂಬ ಅಂಶವನ್ನು ಸಿಬಿಎಫ್‌ಸಿ ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂಬುದಾಗಿ ನ್ಯಾಯಾಲಯ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 19ಕ್ಕೆ ನಿಗದಿಯಾಗಿದೆ.
ಚಿತ್ರದ ವಿರುದ್ಧದ ಆಕ್ಷೇಪಣೆ ಪರಿಗಣಿಸಿ ಪ್ರಮಾಣಪತ್ರ ವಿತರಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಿಬಿಎಫ್‌ಸಿಗೆ ಮಧ್ಯಪ್ರದೇಶ ಹೈಕೋರ್ಟ್ ಆ ಆದೇಶದಲ್ಲಿ ಸೂಚಿಸಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ