ಬೆಂಗಳೂರು : ಸಿನಿಮಾಕ್ಷೇತ್ರದಲ್ಲಿ ಮಹಿಳೆಯರ ಸಮಸ್ಯೆ ಕುರಿತು ಮಲಯಾಳಂ ಸಿನಿಮಾರಂಗದಲ್ಲಿ ರಚನೆಯಾದ ಹೇಮಾ ಕಮಿಟಿ ಮಾದರಿಯಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೂ ತನಿಖಾ ಸಮಿತಿ ರಚಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಭುಗಿಲೆದ್ದ ಹಿನ್ನೆಲೆ ಸ್ಯಾಂಡಲ್ವುಡ್ನಲ್ಲೂ ತನಿಖಾ ಸಮಿತಿ ರಚಿಸುವ ಕುರಿತು ‘ಫೈರ್’ ಸಂಸ್ಥೆ ಸರ್ಕಾರಕ್ಕೆ ಒತ್ತಾಯಿಸಿದೆ.
ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಸಂಸ್ಥೆಯು ಕನ್ನಡ ಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ, ಲಿಂಗ ತಾರತಮ್ಯ, ಸವಾಲುಗಳು, ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದೆ. ಉದ್ಯಮದ ಹಾಗೂ ವಿವಿಧ ಕ್ಷೇತ್ರಗಳ 153 ನಟ-ನಟಿಯರು, ತಂತ್ರಜ್ಞರು, ಪತ್ರಕರ್ತರು ಅರ್ಜಿಗೆ ಸಹಿ ಹಾಕಿ ಒತ್ತಾಯಿಸಿದ್ದಾರೆ.
ಚಿತ್ರರಂಗದಲ್ಲಿ ಮಹಿಳೆಯರು ಉತ್ತಮ ವಾತಾವರಣದಲ್ಲಿ ಹಾಗೂ ಸಮಾನವಾಗಿ ಕೆಲಸ ಮಾಡುವಂತೆ ನಿಯಮಗಳನ್ನು ರೂಪಿಸುವಂತೆ ಫೈರ್ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.‘ಫೈರ್’ ಸಂಸ್ಥೆಯ ಮೂಲಕ ನಟ ಚೇತನ್ ಮನವಿ ಮಾಡಿದ್ದಾರೆ.
2017ರಲ್ಲಿ ಸ್ಥಾಪನೆಯಾದ ಆಂತರಿಕ ದೂರು ಸಮಿತಿಯು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ಹಾಗೂ ಇತರ ಸಮಸ್ಯೆಗಳು ಎದುರಾದರೆ, ಅದನ್ನು ವಿರುದ್ಧ ಹೋರಾಡುವ ಒಂದು ಸಮಿತಿಯಾಗಿದೆ.
ಮಲಯಾಳಂ ಚಿತ್ರರಂಗದಲ್ಲಿರುವ ಲೈಂಗಿಕ ಶೋಷಣೆ ಬಗ್ಗೆ ನ್ಯಾಯಮೂರ್ತಿ ಹೇಮಾ ಕಮಿಟಿ ನೀಡಿದ ವರದಿಯು ಮಲಯಾಳಂ ಚಿತ್ರರಂಗದಲ್ಲಿ ಕೋಲಾಹಲವನ್ನೇ ಎಬ್ಬಿಸಿವೆ. ಇದರಲ್ಲಿ ಖ್ಯಾತನಾಮರ ಹೆಸರುಗಳು ಕೇಳಿಬಂದಿವೆ. ಇದೇ ರೀತಿ ಕಮಿಟಿ ರಚನೆಯಾಗಬೇಕು ಎಂದು ದಕ್ಷಿಣ ಭಾರತದ ಬೇರೆ ಚಿತ್ರರಂಗಗಳು ಕೂಡ ಪಟ್ಟು ಹಿಡಿದಿವೆ. ಕೆಲವು ದಿನಗಳ ಹಿಂದಷ್ಟೇ ತೆಲುಗು ಚಿತ್ರರಂಗದಲ್ಲೂ ಮಹಿಳೆಯ ಮೇಲಿನ ಲೈಂಗಿಕ ಕಿರುಕುಳ ಹಾಗೂ ಇತರೆ ಸಮಸ್ಯೆಗಳನ್ನು ಅಧ್ಯಯನ ಆಗಬೇಕು ಎಂದು ಸಮಂತಾ ಹಾಗೂ ಟಾಲಿವುಡ್ನ ಹಲವು ಸೆಲಬ್ರಿಟಿಗಳು ತೆಲಂಗಾಣ ಸರ್ಕಾರಕ್ಕೆ ಒತ್ತಾಯಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ