ಕಾನ್ಪುರ | ರೈಲ್ವೆ ಹಳಿ ಮೇಲೆ ಎಲ್‌ಪಿಜಿ ಸಿಲಿಂಡರ್ ಇರಿಸಿ ರೈಲು ಸ್ಫೋಟಕ್ಕೆ ಯತ್ನ : ತಪ್ಪಿದ ಅನಾಹುತ

ಕಾನ್ಪುರ: ರೈಲು ಹಳಿಗಳ ಮೇಲೆ ಎಲ್‌ಪಿಜಿ ಸಿಲಿಂಡರ್ ಇಟ್ಟು ರೈಲು ಸ್ಫೋಟಿಸುವ ಯತ್ನ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭಾನುವಾರ ಬೆಳ್ಳಂಬೆಳಗ್ಗೆ ಹಳಿ ಮೇಲೆ ಇಟ್ಟ ಸಿಲಿಂಡರ್‌ಗೆ ರೈಲು ಡಿಕ್ಕಿ ಹೊಡೆದಿದೆ, ಡಿಕ್ಕಿಯ ರಭಸಕ್ಕೆ ಸಿಲಿಂಡರ್ ಹಳಿಯಿಂದ ದೂರ ಎಸೆಯಲ್ಪಟ್ಟಿದೆ ಹಾಗಾಗಿ ಸಂಭವನೀಯ ಅವಘಡ ತಪ್ಪಿದೆ. ಎಲ್‌ಪಿಜಿ ಸಿಲಿಂಡರ್ ಹಳಿಗಳ ಮೇಲೆ ಇಟ್ಟಿರುವುದನ್ನು ಕಂಡ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದ್ದಾರೆ ಆದರೂ ರೈಲು ಸಿಲಿಂಡರ್ ಗೆ ಡಿಕ್ಕಿ ಹೊಡೆದು ಸಿಲಿಂಡರ್ ದೂರ ಎಸೆಯಲ್ಪಟ್ಟಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಹರೀಶ್ ಚಂದ್ರ ಹೇಳಿದ್ದಾರೆ. ಘಟನೆ ಸಂಬಂಧ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ತಪ್ಪಿತಸ್ಥರನ್ನು ಆದಷ್ಟು ಬೇಗ ಪತ್ತೆ ಹಚ್ಚಲಾಗುವುದು ಎಂದು ಹೇಳಿದ್ದಾರೆ.

ಅಲ್ಲದೆ ರೈಲ್ವೆ ಹಳಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಮತ್ತು ಪೆಟ್ರೋಲ್ ಬಾಟಲಿಗಳು ಪತ್ತೆಯಾಗಿದ್ದು ಇದು ಸಾಮಾನ್ಯ ವಿಷಯವಲ್ಲ ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ‘ಪ್ರಯಾಗರಾಜ್‌ನಿಂದ ಭಿವಾನಿ ಕಡೆಗೆ ಹೋಗುತ್ತಿದ್ದ ಕಾಳಿಂದಿ ಎಕ್ಸ್‌ಪ್ರೆಸ್ ಅನ್ನು ಗುರಿಯಾಗಿಸಿ ದುಷ್ಕರ್ಮಿಗಳ ತಂಡ ಇಲ್ಲಿನ ಶಿವರಾಜ್‌ಪುರ ಪ್ರದೇಶದ ಹಳಿಗಳ ಮೇಲೆ ಎಲ್‌ಪಿಜಿ ಸಿಲಿಂಡರ್ ಇಟ್ಟು ಹಳಿತಪ್ಪಿಸಲು ಯತ್ನಿಸಲಾಗಿದೆ. ಆದರೆ ಅದೃಷ್ಟವಶಾತ್ ರೈಲು ಎಲ್‌ಪಿಜಿ ಸಿಲಿಂಡರ್ ಗೆ ಡಿಕ್ಕಿ ಹೊಡೆದರೂ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಹೇಳಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದು ಜೊತೆಗೆ ವಿಧಿವಿಜ್ಞಾನ ತಂಡವನ್ನು ಸಹ ಕರೆಸಲಾಗಿದೆ, ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಮಾಜಿ ಸಚಿವ ಬಾಬಾ ಸಿದ್ದಿಕ್‌ ಹತ್ಯೆ ನಂತರ ನಟ ಸಲ್ಮಾನ್ ಖಾನ್‌ ಭದ್ರತೆ ಹೆಚ್ಚಳ

 

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement