ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಎನ್ಐಎ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ನಾಲ್ವರು ಆರೋಪಿಗಳ ವಿರುದ್ಧ ಸೋಮವಾರ ಚಾರ್ಜ್ ಶೀಟ್ ಸಲ್ಲಿಸಿದೆ.
ನಾಲ್ವರು ಆರೋಪಿಗಳಾದ ಮುಸ್ಸಾವಿರ್ ಹುಸೇನ್ ಶಾಜಿಬ್, ಅಬ್ದುಲ್ ಮಥೀನ್ ಅಹ್ಮದ್ ತಾಹಾ, ಮಾಜ್ ಮುನೀರ್ ಅಹ್ಮದ್ ಮತ್ತು ಮುಝಮ್ಮಿಲ್ ಶರೀಫ್ ವಿರುದ್ಧ ಹಿಂದಿನ ಅಧಿಕೃತ ಕ್ರಿಮಿನಲ್ ಕೋಡ್ – ಭಾರತೀಯ ದಂಡ ಸಂಹಿತೆ(IPC), ಕಾನೂನುಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ) ಕಾಯಿದೆ(UA (P)A, ಸ್ಫೋಟಕ ವಸ್ತುಗಳ ಕಾಯಿದೆ(ESA) ಮತ್ತು ವಿನಾಶ ತಡೆಗಟ್ಟುವಿಕೆ (PDLP) ಕಾಯಿದೆ ಅಡಿ ವಿಶೇಷ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಬೆಂಗಳೂರಿನ  ಐಟಿಪಿಎಲ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಈ ವರ್ಷ ಮಾರ್ಚ್ 1 ರಂದು ಸಂಭವಿಸಿದ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸ್ಫೋಟದಲ್ಲಿ ಒಂಬತ್ತು ಜನರು ಗಾಯಗೊಂಡಿದ್ದರು. ಮಾರ್ಚ್ 3 ರಂದು ಪ್ರಕರಣದ ತನಿಖೆಯನ್ನು ಆರಂಭಿಸಿದ ಎನ್ಐಎ (NIA) ನಾಲ್ವರನ್ನು ಬಂಧಿಸಿತ್ತು.

ಸೋಮವಾರ ಈ ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ, 2024ರ ಜ.22ರಂದು ಅಯೋಧ್ಯೆಯಲ್ಲಿ ನಡೆದಿದ್ದ ಪ್ರಾಣಪ್ರತಿಷ್ಠಾಪನೆ ಸಮಾರಂಭ ದಿನದಂದು ಕರ್ನಾಟಕದ ಬಿಜೆಪಿ ಕಚೇರಿ ಸ್ಫೋಟಗೊಳಿಸುವ ಯೋಜನೆ ವಿಫಲವಾದ ಹಿನ್ನೆಲೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಸ್ಫೋಟಿಸಲು ಸಂಚು ಮಾಡಿದ್ದರು. ಅದರಂತೆ ಆರೋಪಿಗಳು ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಸ್ಫೋಟಿಸಿದ್ದಾರೆ ಎಂದು ಎನ್​ಐಎ ವಿಶೇಷ ಕೋರ್ಟ್​ಗೆ ಸಲ್ಲಿಸಿರುವ ಚಾರ್ಜ್​​ಶೀಟ್​​​ನಲ್ಲಿ ಉಲ್ಲೇಖಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯವರಾದ ಇಬ್ಬರು ವ್ಯಕ್ತಿಗಳು(ಶಾಜಿಬ್ ಮತ್ತು ತಾಹಾ), ಐಸಿಸ್ ಮೂಲಭೂತವಾದಿಗಳಾಗಿದ್ದು, ಈ ಹಿಂದೆ ಸಿರಿಯಾದ ಐಸಿಸ್ ಪ್ರದೇಶಗಳಿಗೆ ವಲಸೆ ಹೋಗಲು ಸಂಚು ರೂಪಿಸಿದ್ದರು. ಅಲ್ಲದೆ ಇತರ ಮುಸ್ಲಿಂ ಯುವಕರನ್ನು ಐಸಿಸ್ ಗೆ ಸೆಳೆಯುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಅಂತಹ ಯುವಕರಲ್ಲಿ ಅಹ್ಮದ್ ಮತ್ತು ಶರೀಫ್ ಕೂಡ ಸೇರಿದ್ದಾರೆ ಎಂದು ಎನ್‌ಐಎ ಹೇಳಿದೆ.
“ಡಾರ್ಕ್ ವೆಬ್‌ನಿಂದ ಡೌನ್‌ಲೋಡ್ ಮಾಡಲಾದ ಭಾರತದ ಮತ್ತು ಬಾಂಗ್ಲಾದೇಶದ ವಿವಿಧ ಗುರುತಿನ ದಾಖಲೆಗಳ ಜೊತೆಗೆ ಮೋಸದಿಂದ ಪಡೆದ ಭಾರತೀಯ ಸಿಮ್ ಕಾರ್ಡ್‌ಗಳು ಮತ್ತು ಭಾರತೀಯ ಬ್ಯಾಂಕ್ ಖಾತೆಗಳನ್ನು ತಾಹಾ ಮತ್ತು ಶಾಜಿಬ್ ಬಳಸಿದ್ದಾರೆ ಎಂದು ಎನ್ಐಎ ತಿಳಿಸಿದೆ.

ಪ್ರಮುಖ ಸುದ್ದಿ :-   ಬೀಳಗಿ : ಮೊಸಳೆ ದಾಳಿಯಿಂದ ಮಾಲೀಕನ ಪ್ರಾಣ ಉಳಿಸಿದ ಎತ್ತು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement