ಕಾಂಗ್ರೆಸ್‌ ಜೊತೆಗೆ ಹೆಜ್ಜೆ ಹಾಕ್ತಾರಾ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ..? ಚರ್ಚೆಗೆ ಗ್ರಾಸವಾಯ್ತು ಫೋಟೋಗಳು…!

ಯಲ್ಲಾಪುರ : ಮಾನಸಿಕವಾಗಿ ಬಿಜೆಪಿಯಲ್ಲಿ ಇಲ್ಲದ ಯಲ್ಲಾಪುರ-ಮುಂಡಗೋಡ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಶಿವರಾಮ ಹೆಬ್ಬಾರ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಏನು ಮಾತುಕತೆ ನಡೆದಿದೆ ಎಂಬುದು ಬಹಿರಂಗವಾಗಿಲ್ಲ. ಆದರೆ ತಾನು ಕ್ಷೇತ್ರದ ಅಭಿವೃದ್ಧಿಗೆ ಹಾಗೂ ನೀರಾವರಿಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದೇನೆ ಎಂದು ಶಿವರಾಮ ಹೆಬ್ಬಾರ ಹೇಳಿರುವುದಾಗಿ ವರದಿಯಾಗಿದೆ.

ಆದರೆ ಹೆಬ್ಬಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಹಲವು ಸುತ್ತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ನಂತರ ಬಹಿರಂಗವಾಗಿಯೇ ಹಸ್ತಲಾಘವ ಮಾಡಿ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ನಂತರ ಸಿದ್ದರಾಮಯ್ಯನವರು ಹೆಬ್ಬಾರ ಅವರ ಹೆಗಲ ಮೇಲೆ ಕೈ ಹಾಕಿಕೊಂಡು ಹೋಗುತ್ತಿರುವ ಫೋಟೋ ಸಹ ಹೊರಹೊಮ್ಮಿವೆ. ಈ ಫೋಟೋಗಳನ್ನು ಶಿವರಾಮ ಹೆಬ್ಬಾರ ಅವರ ಸಮೀಪವರ್ತಿ ವಲಯದಿಂದಲೇ ಹಂಚಿಕೊಳ್ಳಲಾಗಿದೆ. ಹೀಗಾಗಿ ಶುಕ್ರವಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಯಲ್ಲಾಪುರ ವಿಧಾನಸಭಾ ಕ್ಷೇತ್ರ ಹಾಗೂ ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ಅನಾರೋಗ್ಯ : ತುಳುನಾಡಿನ ದೈವದ ಮೊರೆ ಹೋದ ಖ್ಯಾತ ನಟ ವಿಶಾಲ

ಶಾಸಕ ಶಿವರಾಮ ಹೆಬ್ಬಾರ ಮತ್ತು ಸಿದ್ದರಾಮಯ್ಯನವರ ಭೇಟಿ ಇದೇ ಮೊದಲಲ್ಲ. ಈ ಮೊದಲು ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಭೇಟಿಯಾಗಿದ್ದರು. ಅವರ ಪುತ್ರ ವಿವೇಕ ಹೆಬ್ಬಾರ ಕೆಲವು ತಿಂಗಳುಗಳ ಹಿಂದೆ ಬನವಾಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಶಿವರಾಮ ಹೆಬ್ಬಾರ ಸಹ ಕಾಂಗ್ರೆಸ್‌ ಸೇರುತ್ತಾರೆ ಎಂಬ ವದಂತಿ ಇದ್ದರೂ ಈವರೆಗೆ ಸೇರ್ಪಡೆಯಾಗಿಲ್ಲ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ಹಾಗೂ ಅವರ ಭೇಟಿಯ ಬಗ್ಗೆ ಹೆಚ್ಚೆಚ್ಚು ಫೋಟೋಗಳನ್ನು ಅವರ ವಲಯದಿಂದಲೇ ಹಂಚಿಕೊಂಡಿರುವುದರ ಹಿಂದಿನ ಉದ್ದೇಶವೇನು ಎಂಬುದು ಚರ್ಚೆಗೆ ಗ್ರಾಸವಾಗಿದೆ.

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement