ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಭೆ ಪ್ರಕರಣದಲ್ಲಿ ಗುಪ್ತಚರ ಇಲಾಖೆ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಇದೆ ಎಂಬ ಆರೋಪ ಕೇಳಿಬರುತ್ತಿರುವ ಮಧ್ಯೆ ರಾಜ್ಯ ಸರ್ಕಾರ ಶುಕ್ರವಾರ ಗುಪ್ತಚರ ಇಲಾಖೆ ಎಡಿಜಿಪಿಯನ್ನು ವರ್ಗಾವಣೆ ಮಾಡಿದೆ.
ಗುಪ್ತಚರ ಇಲಾಖೆ ಎಡಿಜಿಪಿಯಾಗಿದ್ದ ಶರತಚಂದ್ರ ಅವರನ್ನು ವರ್ಗಾವಣೆ ಮಾಡಿದ್ದು, ಅವರನ್ನು ಸಂಚಾರ, ರಸ್ತೆ ಸುರಕ್ಷತಾ ಎಡಿಜಿಪಿಯನ್ನಾಗಿ ಹಾಗೂ ಪೊಲೀಸ್ ಇಲಾಖೆ ನೇಮಕಾತಿ ವಿಭಾಗದ ನಿರ್ದೇಶಕರನ್ನಾಗಿ ಹೆಚ್ಚುವರಿ ಜವಾಬ್ದಾರಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಅವರನ್ನು ಗುಪ್ತಚರ ಇಲಾಖೆಯ ನೂತನ ಎಡಿಜಿಪಿಯನ್ನಾಗಿ ನೇಮಕ ಮಾಡಲಾಗಿದೆ. ಇದರ ಜೊತೆಗೆ ಹೇಮಂತ ನಿಂಬಾಳ್ಕರ್ ಅವರು ವಾರ್ತಾ ಮತ್ತು ಸಂಪರ್ಕ ಇಲಾಖೆ ಆಯುಕ್ತರಾಗಿಯೂ ಮುಂದುವರೆಯಲಿದ್ದಾರೆ.
ನಾಗಮಂಗಲ ಗಲಭೆ ವಿಚಾರ ಸದ್ಯ ಸಕಷ್ಟು ಚರ್ಚೆಗೆ ಗ್ರಾಸವಾಗುತ್ತಿದ್ದು, ಗುಪ್ತಚರ ಇಲಾಖೆ ಮುಖ್ಯಸ್ಥರನ್ನು ಎತ್ತಂಗಡಿ ಮಾಡಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ಸಿದ್ದರಾಮಯ್ಯ ಆಡಳಿತದಲ್ಲಿ ಅಂದರೆ 2013 ರಿಂದ 18ರಲ್ಲಿ ಹೇಮಂತ ನಿಂಬಾಳ್ಕರ್ ಗುಪ್ತಚರ ಇಲಾಖೆ ಮುಖ್ಯಸ್ಥರಾಗಿದ್ದರು. ಈಗ ಮತ್ತೆ ಹೇಮಂತ ನಿಂಬಾಳ್ಕರ್ ಅವರಿಗೆ ಸಿದ್ದರಾಮಯ್ಯ ಅದೇ ಹೊಣೆಗಾರಿಕೆ ನೀಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ