ಬೆಂಗಳೂರು : ರಾಜ್ಯದಲ್ಲಿ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಹೆಚ್‌ಎಸ್‌ಆರ್‌ಪಿ) ಅಳವಡಿಕೆಗೆ ಸೆಪ್ಟೆಂಬರ್ 15 ಕೊನೆಯ ದಿನವಾಗಿದ್ದು, ಆ ಬಳಿಕ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ.
ಈಗಾಗಲೇ ಸಾರಿಗೆ ಇಲಾಖೆಯು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಕೆಲವು ಬಾರಿ ಅವಧಿ ವಿಸ್ತರಣೆ ಮಾಡಿದೆ. ಆದರೆ ಈವರೆಗೆ ಸುಮಾರು 52 ಲಕ್ಷ ವಾಹನಗಳಿಗಷ್ಟೇ ಹೆಚ್‌ಎಸ್‌ಆರ್‌ಪಿ ಅಳವಡಿಸಲಾಗಿದೆ ಎಂದು ಹೇಳಲಾಗಿದೆ. ಇನ್ನೂ 1.48 ಕೋಟಿ ವಾಹನಗಳು ಎಚ್ ಎಸ್ ಆರ್ ಪಿ ಫಲಕವನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಹೊಸ ನಾಮ ಫಲಕ ಇಲ್ಲದ ವಾಹನಗಳಿಗೆ ಮೊದಲ ಬಾರಿಗೆ 500 ರೂ ದಂಡ ವಿಧಿಸಲಾಗುತ್ತದೆ. ನಂತರದಲ್ಲಿ ಪ್ರತಿ ಬಾರಿಯೂ 1000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ.
ಆರಂಭದಲ್ಲಿ 2023 ಆಗಸ್ಟ್ ತಿಂಗಳಲ್ಲಿ ಎಚ್ ಎಸ್ ಆರ್ ಪಿ ನಾಮ ಫಲಕ ಅಳವಡಿಸಿಕೊಳ್ಳುವಂತೆ ಅಧಿಸೂಚನೆ ಹೊರಡಿಸಿ ನವಂಬರ್ 17 ಕ್ಕೆ ಅಂತಿಮ ಗಡುವು ನೀಡಲಾಗಿತ್ತು. ನಂತರ ಮೂರು ಬಾರಿ ಗಡುವುನ್ನು ವಿಸ್ತರಿಸಲಾಗಿತ್ತು. 2023ರ ನವಂಬರ್ 17, 2024ರ ಫೆಬ್ರವರಿ 17 ಮತ್ತು 2024ರ ಮೇ 17 ಅಂತಿಮ ಗಡುವಾಗಿತ್ತು. ಇದೀಗ 2024ರ ಸೆಪ್ಟೆಂಬರ್ 15 ಕಟ್ಟಕಡೆಯ ಗಡುವು ನಿಗದಿಪಡಿಸಲಾಗಿದೆ.
ಸೆಪ್ಟೆಂಬರ್ 18 ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಹೆಚ್‌ಎಸ್‌ಆರ್‌ಪಿ ಅಳವಡಿಕೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ನಡೆಯಲಿದೆ. ಹೀಗಾಗಿ ಅಲ್ಲಿಯವರೆಗೆ ವಾಹನ ಮಾಲೀಕರ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ. ಗಡುವನ್ನು ಮತ್ತೊಮ್ಮೆ ವಿಸ್ತರಿಸುವ ಅಥವಾ ವಾಹನ ಚಾಲಕರಿಗೆ ದಂಡ ವಿಧಿಸುವ ನಿರ್ಧಾರವನ್ನು ಸೆಪ್ಟೆಂಬರ್ 18ರ ನಂತರವೇ ಕೈಗೊಳ್ಳಬಹುದಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ