ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ನಡೆದ ಪ್ರಜಾಪ್ರಭುತ್ವ ದಿನದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆಯೇ ಭದ್ರತಾ ಲೋಪ ಸಂಭವಿಸಿದೆ. ಕಾರ್ಯಕ್ರಮ ನಡೆಯುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ವೇದಿಕೆಯ ಮೇಲೆ ಬರಲು ಯತ್ನಿಸಿದ ಘಟನೆ ನಡೆದಿದೆ.
ಆದರೆ, ಅವರ ಭದ್ರತಾ ಸಿಬ್ಬಂದಿ ತ್ವರಿತವಾಗಿ ಸಮಯಪ್ರಜ್ಞೆ ಪ್ರದರ್ಶಿಸಿದರು ಮತ್ತು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆತನನ್ನು ತಡೆದರು. ಭದ್ರತಾ ಸಿಬ್ಬಂದಿ ಮುಖ್ಯಮಂತ್ರಿಯಿಂದ ಕೇವಲ ಇಂಚುಗಳಷ್ಟು ದೂರದಲ್ಲಿ ವ್ಯಕ್ತಿಯನ್ನು ತಡೆದು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಮುಖ್ಯಮಂತ್ರಿಗಳ ಅಂಗರಕ್ಷಕರು ಕೂಡಲೇ ಯುವಕನನ್ನ ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದರೂ ಯುವಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆ ಶಾಲು ಎಸೆದಿದ್ದಾನೆ. ಯುವಕ ನುಗ್ಗಿದ ವೇಗಕ್ಕೆ ಗಣ್ಯರು ಗಲಿಬಿಲಿಗೊಂಡರು. ಗೊಂದಲದ ನಡುವೆಯೂ ಯಾವುದೇ ತೊಂದರೆಯಿಲ್ಲದೆ ಕಾರ್ಯಕ್ರಮ ಸಾಂಗವಾಗಿ ಮುಂದುವರಿಯಿತು.
ಈ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ, ಆದರೆ ಪ್ರಾಥಮಿಕ ತನಿಖೆಯ ಪ್ರಕಾರ ಆತ ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದು, ಶಾಲು ಹೊದಿಸಿ ಗೌರವಿಸಲು ಬಯಸಿದ್ದ ಎಂದು ಹೇಳಲಾಗಿದೆ.
ಈ ಹಿಂದೆ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ಸಿದ್ದರಾಮಯ್ಯ ಅವರು ಭದ್ರತಾ ಲೋಪ ಎದುರಿಸಿದ್ದರು. ಕಾಂಗ್ರೆಸ್‌ನ ಲೋಕಸಭಾ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರ ಪ್ರಚಾರಕ್ಕೆ ತೆರೆದ ವಾಹನದಲ್ಲಿ ಸಿದ್ದರಾಮಯ್ಯ ತೆರಳುತ್ತಿದ್ದಾಗ ಬಂದೂಕು ಹಿಡಿದಿದ್ದ ವ್ಯಕ್ತಿಯೊಬ್ಬರು ವಾಹನ ಏರಿ ಸಿದ್ದರಾಮಯ್ಯ ಅವರಿಗೆ ಹಾರಹಾಕಲು ಬಳಿಗೆ ಬಂದಿದ್ದ. ಆ ವ್ಯಕ್ತಿ ಇದ್ದಕ್ಕಿದ್ದಂತೆ ವಾಹನದ ಮೇಲೆ ಏರಿದ್ದ. ಆತನ ತನ್ನ ಸೊಂಟದಲ್ಲಿ ಬಂದೂಕು ಇತ್ತು.
ನಿಮ್ಮ ಕಾಮೆಂಟ್ ಬರೆಯಿರಿ