ಮಂಗಳೂರು : ಹೆಲ್ಮೆಟ್ ಧರಿಸದ ಕಾರಣ ದಂಡ ಪಾವತಿಸಿ ಎಂದು ಆಟೋರಿಕ್ಷಾ ಚಾಲಕನಿಗೆ ಮೆಸೇಜ್ ಬಂದಿರುವ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ನೀವು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ ಕಾರಣ ದಂಡ ಕಟ್ಟಿ ಎಂದು ಮೆಸೇಜ್ ನಲ್ಲಿ ತಿಳಿಸಲಾಗಿದೆ..!
ಉಪ್ಪಿನಂಗಡಿಯಲ್ಲಿ ಆಟೋ ಚಲಾಯಿಸುವ ರೋಹಿತ್ ಎಂಬವವರಿಗೆ ಸೆಪ್ಟೆಂಬರ್ 12ರಂದು ಮೈಸೂರು ರಸ್ತೆಯ ತಲಕಾಡು ಜಂಕ್ಷನ್‌ನಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ್ದರಿಂದ ಮೋಟಾರು ವಾಹನ ಕಾಯಿದೆಯ ಸಂಚಾರಿ ನಿಯಮದಡಿ 500 ರೂಪಾಯಿ ದಂಡ ಪಾವತಿಸಿ ಎಂದು ಸಂದೇಶ ಬಂದಿದೆ. ಪೊಲೀಸರು ದಂಡ ವಿಧಿಸಿರುವ ಕೆಎ 21 ಬಿ 3862 ಎಂಬ ವಾಹನವು ಆಟೊರಿಕ್ಷಾ ಆಗಿದೆ. ಆದರೆ ಪೊಲೀಸರು ದ್ವಿಚಕ್ರ ವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಲಾಗಿದೆ.
ಉಪ್ಪಿನಂಗಡಿಯ ಪೆರಿಯಡ್ಕ ನಿವಾಸಿ ರೋಹಿತ್ ಅವರ ಬಳಿ ಯಾವುದೇ ದ್ವಿಚಕ್ರ ವಾಹನವಿಲ್ಲ. ಆದರೂ ಅವರಿಗೆ ಹೆಲ್ಮೆಟ್ ಧರಿಸದೆ ಇರುವ ಕಾರಣಕ್ಕೆ ದಂಡದ ಮೆಸೇಜ್ ಬಂದಿದೆ. ರೋಹಿತ್ ಅವರು ಈ ಸಂದೇಶ ನೋಡಿ ಕಂಗಾಲಾಗಿದ್ದು, ತಕ್ಷಣವೇ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ರೋಹಿತ್ ಮೈಸೂರಿನ ತಲಕಾಡು ಪೊಲೀಸ್ ಠಾಣೆಯ ನಂಬರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ತಲಕಾಡು ಪೊಲೀಸರು ನಮ್ಮಲ್ಲಿ ಸಿ.ಸಿ. ಕ್ಯಾಮೆರಾದ ಮೂಲಕ ವಾಹನಗಳಿಗೆ ದಂಡ ಹಾಕುವ ವ್ಯವಸ್ಥೆಯಿಲ್ಲ ಎಂದು ಹೆಳಿದ್ದಾರೆ. ಹೀಗಾಗಿ ಈ ಸಂದೇಶ ವಂಚನೆಯಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ