ನವದೆಹಲಿ: ಅಪರಾಧ ಪ್ರಕರಣದಲ್ಲಿ ಆರೋಪಿಗಳಾಗಿರುವವರ ಮನೆ ಅಥವಾ ಅಂಗಡಿಗಳನ್ನು ನ್ಯಾಯಾಲಯದ ಅನುಮತಿ ಪಡೆಯದೇ ಬುಲ್ಡೋಜರ್ ಬಳಸಿ ನೆಲಸಮ ಮಾಡುವುದನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ಆದೇಶ ಹೊರಡಿಸಿದೆ.
ಆದರೆ, ಅನಧಿಕೃತ ಕಟ್ಟಡ ತೆರವುಗೊಳಿಸಲು ಇಂತಹ ಕ್ರಮ ಅಗತ್ಯವಿರುವ ಪ್ರಕರಣಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಮುಂದಿನ ವಿಚಾರಣೆ ಅಕ್ಟೋಬರ್ 1ರಂದು ನಡೆಯಲಿದ್ದು, ಅಲ್ಲಿಯವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ ಹೇಳಿದೆ.
“ಮುಂದಿನ (ವಿಚಾರಣಾ) ದಿನದವರೆಗೆ ಈ ನ್ಯಾಯಾಲಯದ ಅನುಮತಿ ಪಡೆಯದೆ ಯಾವುದನ್ನೂ ನೆಲಸಮ ಮಾಡಬಾರದು. ಆದರೆ ಸಾರ್ವಜನಿಕ ರಸ್ತೆ, ಫುಟ್‌ಪಾತ್, ರೈಲ್ವೆ ಮಾರ್ಗ, ಜಲಮೂಲ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಲಾದ ಅನಧಿಕೃತ ಕಟ್ಟಡಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಕ್ರಿಮಿನಲ್ ಮೊಕದ್ದಮೆಗಳಲ್ಲಿ ಆರೋಪಿಗಳಾದವರ ಮನೆ ಅಥವಾ ಅಂಗಡಿ ನೆಲಸಮ ಮಾಡುವುದನ್ನು ತಡೆಯುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ಮಧ್ಯಂತರ ಆದೇಶ ಪ್ರಕಟಿಸಿದೆ.
ಬುಲ್ಡೋಜರ್ ನ್ಯಾಯವನ್ನು ಈ ಹಿಂದಿನ ವಿಚಾರಣೆ ವೇಳೆ ಖಂಡಿಸಿದ್ದ ಸುಪ್ರೀಂ ಕೋರ್ಟ್ ಇಂತಹ ಸಮಸ್ಯೆಗಳನ್ನು ನಿಭಾಯಿಸಲು ಮಾರ್ಗಸೂಚಿ ಹೊರಡಿಸುವುದಾಗಿ ಹೇಳಿತ್ತು.ಕಟ್ಟಡ ಅಕ್ರಮವಾಗಿದ್ದರೆ ಮಾತ್ರ ನೆಲಸಮ ಮಾಡಬಹುದು ಎಂಬ ಉತ್ತರ ಪ್ರದೇಶ ಸರ್ಕಾರದ ನಿಲುವನ್ನು ಇದೇ ವೇಳೆ ನ್ಯಾಯಾಲಯ ಶ್ಲಾಘಿಸಿತು.
ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರ ತೀವ್ರ ಆಕ್ಷೇಪದ ನಡುವೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.
ಇಂತಹ ಧ್ವಂಸ ಕಾರ್ಯಾಚರಣೆ ಕಾನೂನುಬಾಹಿರವಾಗಿದ್ದು ಕೇವಲ ಒಂದು ಧಾರ್ಮಿಕ ಸಮುದಾಯವನ್ನು (ಮುಸ್ಲಿಮರು) ಗುರಿಯಾಗಿಸಲು ಬಳಸಲಾಗುತ್ತಿದೆ ಎಂಬ ಸುಳ್ಳು ನಿರೂಪಣೆ ಮೂಲಕ ನ್ಯಾಯಾಲಯದ ದಿಕ್ಕುತಪ್ಪಿಸಲಾಗುತ್ತಿದೆ ಎಂದು ಮೆಹ್ತಾ ವಾದಿಸಿದರು.
ಅವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಸಿ. ಯು. ಸಿಂಗ್ ಮತ್ತು ಎಂ ಆರ್ ಶಂಶದ್ ಅವರು ನೆಲಸಮ ಕಾರ್ಯಾಚರಣೆ ಗಂಭೀರ ಸಮಸ್ಯೆ ಎಂದು ವಾದಿಸಿದರು.
ಅರ್ಜಿ ಮುಂದೂಡುವಂತೆ ಮೆಹ್ತಾ ಕೋರಿದರು. ಆಗ ನ್ಯಾ. ವಿಶ್ವನಾಥನ್ ತಾವು ವ್ಯವಸ್ಥಿತ ನಿರ್ದೇಶನಗಳನ್ನು ನೀಡುವವರೆಗೆ ಯಾರೂ ಕಾನೂನನ್ನು ದುರುಪಯೋಗಪಡಿಸಿಕೊಳ್ಳದಂತೆ ತಾಕೀತು ಮಾಡಿದರು. ನ್ಯಾ. ಗವಾಯಿ ಅವರು ಸರ್ಕಾರ ತನ್ನ ವಾದಗಳನ್ನು ವಿವರಿಸುವ ಸಮಗ್ರ ಅಫಿಡವಿಟ್ ಅನ್ನು ಸಲ್ಲಿಸಬಹುದು. ಸರ್ಕಾರದ ಕಾರ್ಯಾಂಗ ನ್ಯಾಯಾಧೀಶನ ಪಾತ್ರ ನಿರ್ವಹಿಸುವಂತಿಲ್ಲ ಎಂದು ಎಚ್ಚರಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ