ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಕಿನ್ನಿಗೋಳಿ ಸಮೀಪ ಹಸುವೊಂದು ಎರಡು ತಲೆಯ ಕರುವಿಗೆ ಜನ್ಮ ನೀಡಿದ ಅಪರೂಪದ ವಿದ್ಯಮಾನ ವರದಿಯಾಗಿದೆ. ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆ ದೂಜಲಗುರಿ ನಿವಾಸಿ ಜಯರಾಮ ಜೋಗಿ ಎಂಬವರಿಗೆ ಸೇರಿದ ಹಸು (Cow) ಎರಡು ತಲೆಯ ಕರುವಿಗೆ ಜನ್ಮ ನೀಡಿದೆ. ಆದರೆ ಕರುವಿನ ದೇಹ ಮಾತ್ರ ಒಂದೇ ಆಗಿದೆ. ತಲೆ ಒಂದಕ್ಕೊಂದು ಅಂಟಿಕೊಂಡಿದ್ದು, ನಾಲ್ಕು ಕಣ್ಣುಗಳಿವೆ. ಮಧ್ಯ ಭಾಗದ ಎರಡು ಕಣ್ಣುಗಳು ಚಲನೆಯಲ್ಲಿಲ್ಲ, ಮತ್ತೆರಡು ಕಣ್ಣುಗಳು ಸರಿಯಾಗಿ ಇದೆ.
ಹಸು ಶನಿವಾರ ರಾತ್ರಿ ಎರಡು ತಲೆಹೊಂದಿರುವ ಕರುವಿಗೆ ಜನ್ಮನೀಡಿದೆ ಎನ್ನಲಾಗಿದ್ದು, ಪಶು ವೈದ್ಯರು ಹಸುವಿನ ಹೆರಿಗೆ ಮಾಡಿಸಿದ್ದಾರಂತೆ. ಎರಡು ತಲೆಯಿಂದಾಗಿ ಎದ್ದು ನಿಲ್ಲಲು ಸಾಧ್ಯವಾಗದ ಈ ಕರುವಿಗೆ ವೈದ್ಯರ ಸಲಹೆಯಂತೆ ಬಾಟಲಿ ಮೂಲಕ ಹಾಲನ್ನು ಕೊಡಲಾಗುತ್ತಿದೆ. ದೇಹದ ತೂಕಕ್ಕಿಂತ ತಲೆಯ ತೂಕವೇ ಜಾಸ್ತಿ ಇರುವುದರಿಂದ ಕರುವಿಗೆ ಎದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಹಸುವಿನ ಹಾಲನ್ನು ಕುಡಿಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಬಾಟಲಿಯಲ್ಲಿ ಕರುವಿಗೆ ಹಾಲು ಕುಡಿಸಲಾಗುತ್ತಿದೆ ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ