ಕಲಾವಿದರ ಮಾಸಾಶನ 3000 ರೂಪಾಯಿಗೆ ಏರಿಕೆ : ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು : ಕಲಾವಿದರ ಮಾಸಾಶನವನ್ನು 3000 ರೂ.ಗಳಿಗೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿಯು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2022, 2023, 2024ನೇ ಸಾಲಿನ ವಾರ್ಷಿಕ ನಾಟಕ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ನಿರಂತರವಾಗಿ ಕಲೆ, ಸಾಹಿತ್ಯ, ಸಂಸ್ಕೃತಿ ರಂಗಭೂಮಿಯನ್ನು ಬೆಂಬಲಿಸಿಕೊಂಡು ಬಂದಿದೆ. ನಾವು ಅಕಾಡೆಮಿಗಳಿಗೆ ಕೊಡುತ್ತಿದ್ದ ಅನುದಾನದ ಮೊತ್ತವನ್ನು ಬಿಜೆಪಿ ಸರ್ಕಾರ ಕಡಿಮೆ ಮಾಡಿತ್ತು. ನಾವು ಅದನ್ನು ಮತ್ತೆ ಹೆಚ್ಚಿಸಿದ್ದೇವೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೇಡಿಕೆಯಂತೆ ಅಕಾಡೆಮಿಗಳ ಮೊತ್ತವನ್ನು ಹೆಚ್ಚಿಸುವ ಜೊತೆಗೆ ಕಲಾವಿದರ ಮಾಸಾಶನವನ್ನು 2500 ರೂ.ಗಳಿಂದ 3000 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಇದೇ ವೇಳೆ ಪ್ರಕಟಿಸಿದರು. ಬಿಜೆಪಿ ಸರ್ಕಾರ ಕಲೆ ಸಂಸ್ಕೃತಿಗೆ ದ್ರೋಹ ಬಗೆದು ಪ್ರಶಸ್ತಿ ವಿತರಣೆ ನಿಲ್ಲಿಸಿತ್ತು. ಮುಂದಿನ ವರ್ಷದಿಂದ ಆಯಾ ವರ್ಷದ ಪ್ರಶಸ್ತಿಯನ್ನು ಆಯಾ ವರ್ಷವೇ ನೀಡಬೇಕು ಎಂದು ಅವರು ಸೂಚನೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ, ಜೀವಮಾನದ ಸಾಧನೆ ಪ್ರಶಸ್ತಿ ಪುರಸ್ಕೃತರಾದ ಡಾ.ಉಮಾಶ್ರೀ, ಪ್ರೊ.ಎಚ್.ಎಸ್.ಶಿವಪ್ರಕಾಶ, ಕೋಟಿಗಾನಲ್ಲಿ ರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ.ಧರಣೀದೇವಿ ಮಾಲಗತ್ತಿ ಮೊದಲಾದವರು ಇದ್ದರು.

ಪ್ರಮುಖ ಸುದ್ದಿ :-   ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement