ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರ ಆಕ್ಷೇಪಾರ್ಹ ಹೇಳಿಕೆ ಬಗ್ಗೆ ಖರ್ಗೆ ಪತ್ರದ ನಂತರ ಮೋದಿ ವಿರುದ್ಧ ಕಾಂಗ್ರೆಸ್‌ ಬಳಸಿದ ʼಅವಹೇಳನಕಾರಿ ಪದʼಗಳ ಬಗ್ಗೆ ಬಿಜೆಪಿ ಪತ್ರ

ನವದೆಹಲಿ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಎರಡು ದಿನಗಳ ನಂತರ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ಬಳಸಿರುವ ಅವಹೇಳನಕಾರಿ ಪದಗಳನ್ನು ಪಟ್ಟಿ ಮಾಡಿ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.
ರಾಹುಲ್‌ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದ ನಡ್ಡಾ, ಜನರು ಹಲವಾರು ಬಾರಿ ತಿರಸ್ಕರಿಸಿದ “ವಿಫಲ ಉತ್ಪನ್ನ” ವನ್ನು ಕಾಂಗ್ರೆಸ್ ಮತ್ತೆ ಹೊಳಪು ಮಾಡಲು ಮತ್ತು ಮರುಪ್ರಾರಂಭಿಸಲು ಪ್ರಯತ್ನಿಸಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
“ಮೋದಿಜಿಗೆ ‘ಮೌತ್ ಕಾ ಸೌದಾಗರ್’ (ಸಾವಿನ ವ್ಯಾಪಾರಿ) ಎಂಬ ಅವಹೇಳನಕಾರಿ ಪದವನ್ನು ಬಳಸಿದ್ದು ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಅಲ್ಲವೇ? ನೀವು ಮತ್ತು ನಿಮ್ಮ ಪಕ್ಷವು ಇಂತಹ ನಾಚಿಕೆಯಿಲ್ಲದ ಹೇಳಿಕೆಗಳನ್ನು ವೈಭವೀಕರಿಸಿದ್ದೀರಿ. ಆಗ ಕಾಂಗ್ರೆಸ್ ರಾಜಕೀಯ ಸೌಹಾರ್ದತೆಯನ್ನು ಮರೆತುಬಿಟ್ಟಿತ್ತೇ?” ಎಂದು ಕೇಂದ್ರ ಆರೋಗ್ಯ ಸಚಿವರೂ ಆದ ಬಿಜೆಪಿ ಅಧ್ಯಕ್ಷ ನಡ್ಡಾ ಕಾಂಗ್ರೆಸ್‌ ಅನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ನಡ್ಡಾ ಅವರು ರಾಹುಲ್‌ ಗಾಂಧಿಯವರ ಒತ್ತಡದಿಂದಾಗಿ ದೇಶದ ಅತ್ಯಂತ ಹಳೆಯ ಪಕ್ಷವು “ಕಾಪಿ ಮತ್ತು ಪೇಸ್ಟ್” ಪಕ್ಷವಾಗಿ ಮಾರ್ಪಟ್ಟಿದೆ ಎಂದು ಬರೆದಿದ್ದಾರೆ.

ಕಾಂಗ್ರೆಸ್ ನಾಯಕರು, ಪ್ರಧಾನಿ ಮೋದಿಯವರನ್ನು “ಹಾವು”, “ಚೇಳು”, “ರಾಕ್ಷಸ”, “ಪಿಕ್ ಪಾಕೆಟ್” ಮತ್ತು “ಹೇಡಿ” ಎಂದು ಕರೆದಿದ್ದಾರೆ. ಅವರ ಪೋಷಕರನ್ನು ಸಹ ಅವಮಾನಿಸಲಾಗಿದೆ ಎಂದು ನಡ್ಡಾ ಪತ್ರದಲ್ಲಿ ಬರೆದಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್‌ ಗಾಂಧಿ ಅವರು ಮೀಸಲಾತಿ ಮತ್ತು ಜಾತಿ ರಾಜಕೀಯವನ್ನು ಆಶ್ರಯಿಸಿದ್ದಾರೆ ಮತ್ತು ಜನರನ್ನು ಪರಸ್ಪರರ ವಿರುದ್ಧ ಪ್ರಚೋದಿಸುತ್ತಿದ್ದಾರೆ. ನಂತರ ಅವರು ವಿದೇಶಕ್ಕೆ ಹೋಗಿ ಮೀಸಲಾತಿಯನ್ನು ಕೊನೆಗೊಳಿಸುವ ಮತ್ತು ದಲಿತ, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳ ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಬಗ್ಗೆ ಮಾತನಾಡುತ್ತಾರೆ ಎಂದು ಬಿಜೆಪಿ ಅಧ್ಯಕ್ಷರು ಆರೋಪಿಸಿದ್ದಾರೆ.
ಭಾರತದ ಪ್ರಜಾಪ್ರಭುತ್ವವನ್ನು ಅತಿ ಹೆಚ್ಚು ಅವಮಾನಿಸಿದ್ದು ಕಾಂಗ್ರೆಸ್ ಎಂದು ನಡ್ಡಾ ಹೇಳಿದ್ದಾರೆ. “ಕಾಂಗ್ರೆಸ್ ತುರ್ತು ಪರಿಸ್ಥಿತಿಯನ್ನು ಹೇರಿತು, ತ್ರಿವಳಿ ತಲಾಖ್ ಅನ್ನು ಬೆಂಬಲಿಸಿತು, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿತು ಎಂದು ಅವರು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ

ಪ್ರಧಾನಿಗೆ ಪತ್ರ ಬರೆದಿದ್ದ ಮಲ್ಲಿಕಾರ್ಜುನ ಖರ್ಗೆ
ಇದಕ್ಕೂ ಮೊದಲು, ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರಾಹುಲ್ ಗಾಂಧಿ ವಿರುದ್ಧ “ಆಕ್ಷೇಪಾರ್ಹ, ಹಿಂಸಾತ್ಮಕ ಮತ್ತು ಅಸಭ್ಯ” ಟೀಕೆಗಳ ಸರಣಿಯನ್ನು ಫ್ಲ್ಯಾಗ್ ಮಾಡಿದ್ದರು.
ರಾಹುಲ್‌ ಗಾಂಧಿಯವರ ಮೇಲಿನ ಮಾತಿನ ದಾಳಿಯನ್ನು ಪಟ್ಟಿ ಮಾಡಿದ ಖರ್ಗೆ, ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಅವರ “ನಂಬರ್ 1 ಭಯೋತ್ಪಾದಕ” ಹೇಳಿಕೆ, ರಾಹುಲ್‌ ಗಾಂಧಿಯವರ ನಾಲಿಗೆಯನ್ನು ಕತ್ತರಿಸುವವರಿಗೆ ₹ 11 ಲಕ್ಷ ಘೋಷಿಸಿದ ಶಿವಸೇನೆ ನಾಯಕ ಮತ್ತು ದೆಹಲಿ ಬಿಜೆಪಿ ನಾಯಕ ತರ್ವಿಂದರ್ ಸಿಂಗ್ ಮರ್ವಾ ನೀಡಿದ ಹೇಳಿಕೆ ರಾಹುಲ್‌ ಗಾಂಧಿ ಅವರ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಆದ ಗತಿ ಅಇವರಿಗೂ ಬರಲಿದೆ ಎಂಬ ಬೆದರಿಕೆ ಬಗ್ಗೆ ಪತ್ರದಲ್ಲಿ ಬರೆದಿದ್ದಾರೆ.
“ಭಾರತೀಯ ಸಂಸ್ಕೃತಿಯು ಪ್ರಪಂಚದಾದ್ಯಂತ ಅಹಿಂಸೆ ಮತ್ತು ಪ್ರೀತಿಗೆ ಹೆಸರುವಾಸಿಯಾಗಿದೆ … ಬ್ರಿಟಿಷರ ಕಾಲದಲ್ಲಿ ಗಾಂಧೀಜಿ ಈ ಮಾನದಂಡಗಳನ್ನು ನಮ್ಮ ರಾಜಕೀಯದ ಪ್ರಮುಖ ಭಾಗವಾಗಿಸಿದರು. ಸ್ವಾತಂತ್ರ್ಯದ ನಂತರ, ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಗೌರವಾನ್ವಿತ ಭಿನ್ನಾಭಿಪ್ರಾಯದ ದೀರ್ಘ ಸಂಪ್ರದಾಯವಿದೆ. ಎಂದು ಕಾಂಗ್ರೆಸ್ ಮುಖ್ಯಸ್ಥರು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಸೇನೆಗೆ ಮತ್ತಷ್ಟು ಬಲ ; ಅಮೆರಿಕದಿಂದ 31 ಪ್ರಿಡೇಟರ್ ಡ್ರೋನ್‌ ಖರೀದಿಗೆ 32,000 ಕೋಟಿ ರೂ. ಐತಿಹಾಸಿಕ ಒಪ್ಪಂದಕ್ಕೆ ಸಹಿ

ರಾಹುಲ್ ಗಾಂಧಿಯವರ ಮೇಲೆ ಬಿಜೆಪಿ ನಾಯಕರ ಮಾತಿನ ದಾಳಿಯಿಂದ ಕೋಟ್ಯಂತರ ಕಾಂಗ್ರೆಸ್ ಕಾರ್ಯಕರ್ತರು ಆತಂಕಕ್ಕೊಳಗಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ದ್ವೇಷವನ್ನು ಹರಡುವ ಇಂತಹ ಶಕ್ತಿಗಳಿಂದಾಗಿಯೇ ರಾಷ್ಟ್ರಪಿತ ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ತಮ್ಮ ಪ್ರಾಣವನ್ನು ತ್ಯಾಗ ಮಾಡಬೇಕಾಯಿತು. ಆಡಳಿತ ಪಕ್ಷದ ಈ ರಾಜಕೀಯ ನಡವಳಿಕೆಯು ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ಅಸಭ್ಯ ಉದಾಹರಣೆಯಾಗಿದೆ ಎಂದು ಖರ್ಗೆ ಹೇಳಿದ್ದಾರೆ.
ಬಿಜೆಪಿ ನಾಯಕರು ಸೌಜನ್ಯ ಮತ್ತು ಸಜ್ಜನಿಕೆಯಿಂದ ವರ್ತಿಸುವಂತೆ ಸೂಚಿಸಿ ಎಂದು ಪ್ರಧಾನಿ ಮೋದಿಗೆ ಖರ್ಗೆ ಅವರು ವಿನಂತಿಸಿದ್ದಾರೆ. ಅಲ್ಲದೆ, “ಭಾರತೀಯ ಪ್ರಜಾಪ್ರಭುತ್ವವನ್ನು ಅವನತಿಯಿಂದ ಉಳಿಸಲು ಇಂತಹ ಹೇಳಿಕೆಗಳಿಗೆ ಕಠಿಣ ಕಾನೂನು ಕ್ರಮಗಳು ಇರಬೇಕು ಎಂಬುದನ್ನೂ ಹೇಳಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement