ಹಿಂದಿನ ಜಗನ್ ಸರ್ಕಾರ ಆಡಳಿತದಲ್ಲಿ ತಿರುಪತಿ ಲಡ್ಡಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ; ಚಂದ್ರಬಾಬು ನಾಯ್ಡು ಗಂಭೀರ ಆರೋಪ

ಅಮರಾವತಿ : ಹಿಂದಿನ ವೈಎಸ್ಆರ್ ಕಾಂಗ್ರೆಸ್ ಸರ್ಕಾರದಲ್ಲಿ ʼತಿರುಪತಿ ಲಡ್ಡುʼಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗಂಭೀರ ಆರೋಪ ಮಾಡಿದ್ದಾರೆ.
ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಈ ಆರೋಪವನ್ನು ತಳ್ಳಿಹಾಕಿದೆ ಮತ್ತು ಇದು ದುರುದ್ದೇಶಪೂರಿತ ಆರೋಪ ಎಂದು ಹೇಳಿದೆ.
ಬುಧವಾರ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, ಜಗನ್ ರೆಡ್ಡಿ ಸರ್ಕಾರದ ಅಡಿಯಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಪ್ರಸಾದ ʼತಿರುಪತಿ ಲಡ್ಡುʼಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಹೇಳಿದ್ದಾರೆ. ಈ ದೇವಾಲಯವನ್ನು ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ನಿರ್ವಹಿಸುತ್ತವೆ.
ಈ ವರ್ಷ ಜೂನ್‌ನಲ್ಲಿ ಆಂಧ್ರಪ್ರದೇಶದಲ್ಲಿ ವಿಧಾನಸಭೆ ನಡೆದ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ, ಜನಸೇನೆ ಮತ್ತು ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆ.

“ಕಳೆದ 5 ವರ್ಷಗಳಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರು ತಿರುಮಲದ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ, ಅವರು ‘ಅನ್ನದಾನ’ (ಉಚಿತ ಊಟ) ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿದ್ದಾರೆ ಮತ್ತು ಪವಿತ್ರ ತಿರುಮಲ ಲಡ್ಡುವಿಗೆ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿ ಅದನ್ನು ಕಲುಷಿತಗೊಳಿಸಿದ್ದಾರೆ. ಆದರೆ, ನಾವು ಈಗ ಶುದ್ಧ ತುಪ್ಪವನ್ನು ಬಳಸುತ್ತಿದ್ದೇವೆ ಹಾಗೂ ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಚಂದ್ರಬಾಬು ನಾಯ್ಡು ಅವರು ತಿರುಮಲ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ ಎಂದು ವೈಎಸ್ಆರ್ ಕಾಂಗ್ರೆಸ್ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿ ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಮಾಜಿ ಸಚಿವ ಬಾಬಾ ಸಿದ್ದಿಕ್‌ ಹತ್ಯೆ ನಂತರ ನಟ ಸಲ್ಮಾನ್ ಖಾನ್‌ ಭದ್ರತೆ ಹೆಚ್ಚಳ

“ಚಂದ್ರಬಾಬು ನಾಯ್ಡು ಅವರು ತಿರುಮಲದ ಪಾವಿತ್ರ್ಯತೆ ಮತ್ತು ಕೋಟ್ಯಂತರ ಹಿಂದೂಗಳ ನಂಬಿಕೆಗೆ ಧಕ್ಕೆ ತಂದಿದ್ದಾರೆ. ತಿರುಮಲ ಪ್ರಸಾದದ ಬಗ್ಗೆ ಅವರ ಕಾಮೆಂಟ್‌ಗಳು ದುರುದ್ದೇಶಪೂರಿತವಾಗಿವೆ. ಯಾವುದೇ ವ್ಯಕ್ತಿ ಇಂತಹ ಮಾತುಗಳನ್ನು ಆಡುವುದಿಲ್ಲ ಅಥವಾ ಅಂತಹ ಆರೋಪಗಳನ್ನು ಮಾಡುವುದಿಲ್ಲ” ಎಂದು ಸುಬ್ಬಾ ರೆಡ್ಡಿ ಹೇಳಿದ್ದಾರೆ.
‘ರಾಜಕೀಯ ಲಾಭಕ್ಕಾಗಿ ಚಂದ್ರಬಾಬು ನಾಯ್ಡು ಯಾವ ಮಟ್ಟಕ್ಕೂ ಇಳಿಯುತ್ತಾರೆ ಎಂಬುದು ಮತ್ತೆ ಸಾಬೀತಾಗಿದೆ. ಭಕ್ತರ ನಂಬಿಕೆ ಗಟ್ಟಿಗೊಳಿಸಲು ನಾನು ಕುಟುಂಬ ಸಮೇತ ತಿರುಮಲ ಪ್ರಸಾದದ ವಿಚಾರವಾಗಿ ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧ. ಚಂದ್ರಬಾಬು ನಾಯ್ಡು ತಮ್ಮ ಕುಟುಂಬದೊಂದಿಗೆ ಅದೇ ರೀತಿ ಮಾಡಲು ಸಿದ್ಧರಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement