ಬೆಂಗಳೂರು: ಬೆಂಗಳೂರು ಆರ್ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಮಹಿಳೆಯೊಬ್ಬರು ನೀಡಿದ ಅತ್ಯಾಚಾರ ಆರೋಪದಡಿ ಮುನಿರತ್ನ ಅವರನ್ನು ಬಂಧಿಸಲಾಗಿದೆ.
ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಹಾಗೂ ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ಗುರುವಾರ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ರಾಮನಗರದ ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. 2020 ರಿಂದ 2022ರವರೆಗೆ ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಬ್ಲ್ಯಾಕ್ಮೇಲ್ ಮಾಡಿ ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ರಾಜರಾಜೇಶ್ವರಿ ನಗರದ 40 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.
ಸಂತ್ರಸ್ತೆ ದೂರಿನ ಆಧಾರದ ಮೇಲೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆ ಪೊಲೀಸರು ಶಾಸಕ ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಈಗ ಕಗ್ಗಲೀಪುರ ಠಾಣೆ ಪೊಲೀಸರು ಶಾಸಕ ಮುನಿರತ್ನ ಅವರನ್ನು ಬಂಧಿಸಿದ್ದಾರೆ.
ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಗುತ್ತಿಗೆಯಲ್ಲಿ ಕಮಿಷನ್ ನೀಡುವಂತೆ ಗುತ್ತಿಗೆದಾರ ಚಲುವರಾಜು ಅವರಿಗೆ ಜೀವ ಬೆದರಿಕೆ ಹಾಕಿ ನಿಂದಿಸಿದ ಹಾಗೂ ಜಾತಿ ನಿಂದನೆ ಮಾಡಿದ ಆರೋಪದ ಮೇರೆಗೆ ವೈಯಾಲಿಕಾವಲ್ ಠಾಣೆಯಲ್ಲಿ ಮುನಿರತ್ನ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದ್ದವು. ಈ ಪ್ರಕರಣದ ನಂತರ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ