ತಿರುವನಂತಪುರಂ : ಮಲೆಯಾಳಂನ ಸಿನೆಮಾ ಉದ್ಯಮವನ್ನು ವ್ಯಾಪಿಸಿರುವ ಮೀಟೂ ಪ್ರಕರಣಗಳ ಇತ್ತೀಚಿನ ಅಲೆಯಲ್ಲಿ ಸಿಪಿಐ(ಎಂ) ಶಾಸಕ ಎಂ ಮುಖೇಶ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಮಾಜಿ ನಟಿಯೊಬ್ಬರು ಮಲಯಾಳಂ ನಟ-ರಾಜಕಾರಣಿಯ ಮೇಲೆ ಅತ್ಯಾಚಾರದ ಆರೋಪವನ್ನು ಮಾಡಿದ್ದರು, ಅದರ ಆಧಾರದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದಾಗ್ಯೂ, ಅವರು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿರುವುದರಿಂದ ಅವರು ಬಿಡುಗಡೆಯಾಗುವ ಸಾಧ್ಯತೆಗಳಿವೆ. ಮುಕೇಶ ವಿರುದ್ಧ ಅತ್ಯಾಚಾರ ಸೇರಿದಂತೆ ಜಾಮೀನು ರಹಿತ ಅಪರಾಧಗಳನ್ನು ಎಸಗಿರುವ ಆರೋಪ ಹೊರಿಸಲಾಗಿದೆ.
ಮಲೆಯಾಳಂ ಸಿನೆಮಾ ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಮತ್ತು ಶೋಷಣೆಗೆ ಸಂಬಂಧಿಸಿದಂತೆ ಕಳೆದ ತಿಂಗಳು ಸಾರ್ವಜನಿಕವಾಗಿ ಪ್ರಕಟವಾದ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯಲ್ಲಿ, ಹಲವಾರು ನಟರು ಮತ್ತು ನಿರ್ದೇಶಕರ ಹೆಸರುಗಳು ಕಾಣಿಸಿಕೊಂಡಿವೆ. ನಂತರ ಕೇರಳ ಸರ್ಕಾರವು ಆರೋಪಗಳ ತನಿಖೆಗಾಗಿ ಏಳು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಪ್ರಕಟಿಸಿದೆ.
ಮಂಗಳವಾರ ವಿಚಾರಣೆ ನಡೆಸಿದ ಎಸ್‌ಐಟಿ ಮುಖೇಶ ಅವರನ್ನು ಬಂಧಿಸಿದೆ. ಈ ತಿಂಗಳ ಆರಂಭದಲ್ಲಿ ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು.
ಮಾಜಿ ನಟಿಯೊಬ್ಬರು ದಾಖಲಿಸಿರುವ ಅತ್ಯಾಚಾರ ಪ್ರಕರಣದಲ್ಲಿ ಮತ್ತೋರ್ವ ಚಿತ್ರನಟ ಸಿದ್ದಿಕ್ ಅವರನ್ನು ಬಂಧಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ನಟ ಸಿದ್ದಿಕ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ. ಸಿದ್ದಿಕ್‌ನ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದು, ಲುಕ್‌ಔಟ್ ಸುತ್ತೋಲೆ ಹೊರಡಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ