ಬೆಂಗಳೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರೆಮರೆಯಲ್ಲಿ ಇಲ್ಲ ಎಂದು ಒಪ್ಪಿಕೊಳ್ಳುವುದು ಕಷ್ಟ. ಮುಖ್ಯಮಂತ್ರಿ ಕುಟುಂಬದವರೇ ಫಲಾನುಭವಿ ಆಗಿರುವುದರಿಂದ ಮುಡಾ ಪ್ರಕರಣದಲ್ಲಿ ತನಿಖೆ ಅಗತ್ಯವಿದೆ ಎಂದು ಹೈಕೋರ್ಟ್ (High Court) ತೀರ್ಪಿನಲ್ಲಿ ಹೇಳಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(MUDA) ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಸೆಕ್ಷನ್ 17 ಎ ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ ಸೆಕ್ಷನ್ 17 ಎ ಅಡಿಯಲ್ಲಿ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದನ್ನು ಎತ್ತಿಹಿಡಿಯುವಾಗ ಈ ಅವಲೋಕನ ಮಾಡಲಾಗಿದೆ.
2001ರಲ್ಲಿ ತನ್ನ ಜಮೀನನ್ನು ಮುಡಾ ಸ್ವಾಧೀನ ಪಡಿಸಿಕೊಂಡು ನಿವೇಶನಗಳನ್ನಾಗಿ ಮಾಡಿದ್ದು ಈ ಹಿನ್ನೆಲೆಯಲ್ಲಿ ಪರಿಹಾರಾರ್ಥವಾಗಿ ತನಗೆ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಆಗಬೇಕು ಎಂದು ಸಿದ್ದರಾಮಯ್ಯ ಅವರ ಪತ್ನಿ 2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುಡಾಗೆ ಮನವಿ ಮಾಡಿದ್ದರು. ಆದರೆ ಆದರೆ ಆಗ ನಿವೇಶನ ಹಂಚಿಕೆ ಅನುಪಾತ 60:40 ಆಗಿತ್ತು, 2015ರಲ್ಲಿ ಈ ನಿವೇಶನಗಳನ್ನು ಹಂಚುವ ಸಲುವಾಗಿಯೇ ಕಾನೂನನ್ನು 50 : 50 ಅನುಪಾತಕ್ಕೆ ಬದಲಾಯಿಸಲಾಯಿತು. ಮುಡಾ ಈ ನಿರ್ಣಯ ತೆಗೆದುಕೊಂಡ ಸಭೆಯಲ್ಲಿ ಸಿದ್ದರಾಮಯ್ಯ ಅವರ ಪುತ್ರ ಭಾಗವಹಿಸಿದ್ದರು. 3.56 ಲಕ್ಷ ರೂಪಾಯಿ ಎಂದು ಇದ್ದ ಪರಿಹಾರವು 56 ಕೋಟಿ ರೂ ಆಗುವಲ್ಲಿ ಅರ್ಜಿದಾರರ ಪಾತ್ರವಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಅನುಕೂಲ ಆಗುವ ರೀತಿಯಲ್ಲಿ ಕಾನೂನನ್ನು ಯಾಕೆ ಮತ್ತು ಹೇಗೆ ಬದಲಾಯಿಸಲಾಯಿತು ಎಂಬ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಪೀಠ ಹೇಳಿದೆ.
1996 ರಿಂದ 1999 ರ ವರೆಗೆ ಮತ್ತು 2004 ಮತ್ತು 2005 ರಲ್ಲಿ ಸಿದ್ದರಾಮಯ್ಯ ಅವರು ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿದ್ದರು. ಅವರು 2013-2018 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾದರು. ಅವರು ಪ್ರಸ್ತುತ 2023 ರಿಂದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮಗ 2018 ಮತ್ತು 2023 ರ ನಡುವೆ ಶಾಸಕರಾಗಿದ್ದರು. ಪ್ರಶ್ನಾರ್ಹ ಆಸ್ತಿಯ ಖರೀದಿಯು 1935 ರಲ್ಲಿ 300 ರೂಪಾಯಿಗಳ ಆಫ್‌ಸೆಟ್ ಬೆಲೆಯಲ್ಲಿತ್ತು. ಮಾಲೀಕರ ಪರವಾಗಿ ನಿರ್ಧರಿಸಲಾದ ಪರಿಹಾರದ ಮೊತ್ತವು 1997 ರಲ್ಲಿ 3,56,000 ಆಗಿತ್ತು. 2021 ರಲ್ಲಿ, ಈ ಮೊತ್ತವು 56 ಕೋಟಿ ರೂಪಾಯಿಗಳಿಗೆ ಏರಿತು. ಸಿದ್ದರಾಮಯ್ಯ ಅವರು ಆಡಳಿತದ ಚುಕ್ಕಾಣಿ ಹಿಡಿಯದಿದ್ದರೆ ಇಷ್ಟು ದೊಡ್ಡ ಲಾಭ ಸಿಗುತ್ತಿರಲಿಲ್ಲ’ ಎಂದು ಕೋರ್ಟ್ ಹೇಳಿದೆ.
14 ನಿವೇಶನಗಳು ಮುಖ್ಯಮಂತ್ರಿಯವರ ಪತ್ನಿ ಪರವಾಗಿ ನೋಂದಣಿಯಾದ ನಂತರ, ನಗರಾಭಿವೃದ್ಧಿ ಇಲಾಖೆಯು ಮುಡಾ ಆಯುಕ್ತರಿಗೆ ಮಾರ್ಗಸೂಚಿಗಳನ್ನು ರೂಪಿಸುವವರೆಗೆ ಪರಿಹಾರದ ನಿವೇಶನಗಳ ಹಂಚಿಕೆಯನ್ನು ನಿಲ್ಲಿಸುವಂತೆ ನಿರ್ದೇಶನ ನೀಡಿದೆ. “ಆದ್ದರಿಂದ, ಮೇಲ್ನೋಟಕ್ಕೆ ಕಾನೂನು ಉಲ್ಲಂಘನೆಯಾದಂತೆ ಅನಿಸುತ್ತದೆ. ಏಕೆಂದರೆ ಅರ್ಜಿದಾರರ ಪತ್ನಿಗೆ ಅನುಕೂಲವಾಗುವಂತೆ ಸೈಟ್‌ಗಳ ಹಂಚಿಕೆಯು ಭೂ ಸ್ವಾಧೀನಪಡಿಸಿಕೊಂಡ ನಿಯಮಗಳಿಗೆ ಪರಿಹಾರ 2009 ಮತ್ತು ಭೂ ನಿಯಮಗಳ ಸ್ವಯಂಪ್ರೇರಿತ ಸರೆಂಡರ್‌ನ ಪ್ರೋತ್ಸಾಹಕ ಯೋಜನೆ 1991ಕ್ಕೆ ವಿರುದ್ಧವಾಗಿದೆ ಎಂದು ಹೇಳಲಾಗಿದೆ ಎಂದು ಕೋರ್ಟ್ ಹೇಳಿದೆ.
ರಾಜ್ಯಪಾಲರು ಆದೇಶ ಮಾಡುವಾಗ ವಿವೇಚನೆ ಬಳಸಿಲ್ಲ ಎನ್ನುವಂತಿಲ್ಲ. ಸಂಪೂರ್ಣ ವಿವೇಚನೆ ಬಳಸಿಯೇ ಆದೇಶ ನೀಡಿದ್ದಾರೆ. ಸ್ವತಂತ್ರ ವಿವೇಚನೆ ಬಳಸಿದ ರಾಜ್ಯಪಾಲರ ಕ್ರಮದಲ್ಲಿ ತಪ್ಪು ಕಂಡಿಲ್ಲ ಎಂದು ನ್ಯಾಯಪೀಠ ಹೇಳಿದೆ.
ದೂರುದಾರರು ತಮ್ಮ ದೂರು ಸಲ್ಲಿಸಿರುವುದು ಅಥವಾ ರಾಜ್ಯಪಾಲರಿಂದ ಅನುಮತಿ ಕೋರಿರುವುದು ಸೂಕ್ತವಾಗಿದೆ. ಈ ಪ್ರಕರಣದಲ್ಲಿನ ವಾಸ್ತವಾಂಶಗಳನ್ನು ಗಮನಿಸಿದರೆ ಸೆಕ್ಷನ್ 17 ಎ ಅಡಿ ಅನುಮತಿ ಪಡೆಯುವುದು ಅಗತ್ಯವಾಗಿತ್ತು. ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆಯ ಸೆಕ್ಷನ್ 17 ಎ ಅಡಿ ತನಿಖೆಗೆ ಪೊಲೀಸ್ ಅಧಿಕಾರಿಯೇ ಅನುಮತಿ ಪಡೆಯಬೇಕೆಂದಿಲ್ಲ. ಖಾಸಗಿ ದೂರುದಾರರು ರಾಜ್ಯಪಾಲರಿಂದ ಅನುಮತಿ ಪಡೆಯಬಹುದು. ರಾಜ್ಯಪಾಲರು ಸಾಮಾನ್ಯ ಸಂದರ್ಭಗಳಲ್ಲಿ ಸಚಿವ ಸಂಪುಟದ ನಿರ್ದೇಶನ ಪಾಲಿಸಬೇಕು. ವಿಶೇಷ ಸಂದರ್ಭದಲ್ಲಿ ರಾಜ್ಯಪಾಲರು ಸ್ವಂತ ವಿವೇಚನೆ ಬಳಸಬಹುದು. ಈ ಪ್ರಕರಣ ಸ್ವಂತ ವಿವೇಚನೆ ಬಳಸಲು ಅರ್ಹವಾದ ಪ್ರಕರಣವಾಗಿದೆ ಎಂದು ಪೀಠ ಹೇಳಿದೆ.
ನಿರ್ಧಾರ ಕೈಗೊಳ್ಳುವ ಸಕ್ಷಮ ಪ್ರಾಧಿಕಾರದ ಕಡತದಲ್ಲಿ ಕಾರಣಗಳಿದ್ದರೆ ಸಾಕು. ರಾಜ್ಯಪಾಲರು ಈ ಪ್ರಕರಣದಲ್ಲಿ ಅಗಾಧ ವಿವೇಚನೆಯನ್ನು ಬಳಸಿದ್ದಾರೆ.
ದೂರಿನಲ್ಲಿರುವ ಅಂಶಗಳು ನಿಸ್ಸಂದೇಹವಾಗಿ ತನಿಖೆಯನ್ನು ಬಯಸುತ್ತವೆ. ಏಕೆಂದರೆ ಫಲಾನುಭವಿಗಳು ಹೊರಗಿನವರಲ್ಲ . ಸಿದ್ದರಾಮಯ್ಯ ಪತ್ನಿಯೇ ಇದರ ಫಲಾನುಭವಿಯಾಗಿದ್ದಾರೆ ಎಂದು ಹೈಕೋರ್ಟ್ ಪೀಠವು ರಾಜ್ಯಪಾಲರ ಕ್ರಮ ಎತ್ತಿಹಿಡಿಯಲು 11 ಕಾರಣಗಳನ್ನು ನೀಡಿದೆ.
ಈ ಘಟನಾವಳಿಗಳ ಸರಪಳಿಯಲ್ಲಿ ಕೆಲವು ಚುಕ್ಕೆಗಳನ್ನು ಸಂಪರ್ಕಿಸುವ ಅಗತ್ಯವಿದೆ ಮತ್ತು ಇದಕ್ಕೆ ವಿಚಾರಣೆಯ ಅಗತ್ಯವಿದೆ ಎಂದು ಪೀಠ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಶಿಫಾರಸು ಮಾಡಿಲ್ಲ ಅಥವಾ ಯಾವುದೇ ದಾಖಲೆಗೆ ಸಹಿ ಮಾಡಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾದವನ್ನು ಅದು ತಿರಸ್ಕರಿಸಿದೆ.
ಮುಡಾ ಪ್ರಕರಣದಲ್ಲಿ ಮೈಸೂರು ಮೂಲದ ಸ್ನೇಹಮಯಿ ಕೃಷ್ಣ, ಮಡಿಕೇರಿಯ ಟಿಜೆ ಅಬ್ರಹಾಂ ಹಾಗೂ ಪ್ರದೀಪ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಈ ಮೂರೂ ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ಆಗಸ್ಟ್ 17 ರಂದು ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ