ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ಹಂಚಿಕೆ ಪ್ರಕರಣ : ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ತನಿಖೆ ಮುಂದುವರಿಯಲಿ ಎಂದ ಹೈಕೋರ್ಟ್‌

ಬೆಂಗಳೂರು : ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿದ ಆರೋಪದ ಸಂಬಂಧ ಹಾಸನದ ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ಅವರ ವಿರುದ್ಧ ತನಿಖೆ ಮುಂದುವರಿಯಬೇಕು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶಿಸಿದೆ.
ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ನಡೆಸುತ್ತಿದೆ. ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಬೆಂಗಳೂರಿ ಸೈಬರ್‌ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ನಂತರದ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಪ್ರೀತಂ ಗೌಡ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರೀತಂ ಗೌಡ ಪರ ವಕೀಲ ಸಂದೀಪ ಪಾಟೀಲ ಅವರು “ಅರ್ಜಿಯನ್ನು ದಸರಾ ರಜೆಯ ಬಳಿಕ ವಿಚಾರಣೆಗೆ ತೆಗೆದುಕೊಳ್ಳಬೇಕು. ಪ್ರೀತಂಗೌಡ ವಿಚಾರಣೆಯಲ್ಲಿ ಭಾಗಿಯಾಗಿ, ಎಸ್‌ಐಟಿಯ ಮುಂದೆ ಹೇಳಿಕೆ ದಾಖಲಿಸಿದ್ದಾರೆ” ಎಂದರು.
ಆಗ ಪೀಠವು “ವಿಚಾರಣೆ ಮುಂದುವರಿಯಲಿ. ಇಲ್ಲಿಯವರೆಗೆ ತನಿಖೆ ಏನಾಗಿದೆ?” ಎಂದು ಪ್ರಾಸಿಕ್ಯೂಷನ್‌ಗೆ ಪ್ರಶ್ನಿಸಿದರು.
ಈ ಮಧ್ಯೆ, ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮಕುಮಾರ ಅವರು “ವೀಡಿಯೊಗಳಿಗೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗೆ ಕಾಯುತ್ತಿದ್ದೇವೆ. ಇದು ಡಿಜಿಟಲ್‌ ಅಪರಾಧ” ಎಂದರು.

ಪ್ರಮುಖ ಸುದ್ದಿ :-   ವಿಪರೀತ ಮಳೆ: ನಾಳೆ (ಅ.16) ಬೆಂಗಳೂರಿನ ಶಾಲಾ-ಕಾಲೇಜುಗಳಿಗೂ ರಜೆ ಘೋಷಣೆ

ಆಗ ಪೀಠವು “ವಿಚಾರಣೆಯನ್ನು ಅಕ್ಟೋಬರ್‌ 24ಕ್ಕೆ ನಿಗದಿಗೊಳಿಸಲಾಗಿದೆ. ಅಲ್ಲಿಯವರೆಗೆ ಎಫ್‌ಎಸ್‌ಎಲ್‌ ವರದಿ ಬರಬಹುದು” ಎಂದರು. ಅಲ್ಲದೇ, ತನಿಖೆಗೆ ಸಮನ್ವಯ ಪೀಠವು ತಡೆ ನೀಡಿಲ್ಲ. ತನಿಖೆ ಮುಂದುವರಿಯಬೇಕು ಅದಕ್ಕೆ ಪ್ರೀತಂ ಗೌಡ ಸಹಕರಿಸಬೇಕು. ಬಂಧನದಿಂದ ರಕ್ಷಣೆಯ ಆದೇಶ ಮುಂದವರಿಯಲಿದೆ” ಎಂದರು.
ಹಾಸನದ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಹಾಸನದ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಸೇರಿದಂತೆ ಮತ್ತಿತರರ ವಿರುದ್ಧ ಬೆಂಗಳೂರಿನ ಸೈಬರ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣವನ್ನು ವಿಶೇಷ ತನಿಖಾ ದಳದ ತನಿಖೆಗೆ ವಹಿಸಲಾಗಿದೆ. ಇದನ್ನು ರದ್ದುಗೊಳಿಸುವಂತೆ ಪ್ರೀತಂ ಗೌಡ ಕೋರಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement