
ಬೆಂಗಳೂರು: ಈಗ ರದ್ದಾದ ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಮಾಡಿದ ಆರೋಪದ ಮೇಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್ ದಾಖಲಿಸಲು ಬೆಂಗಳೂರು ನ್ಯಾಯಾಲಯ ಆದೇಶಿಸಿದೆ.
ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ನಡೆಸಲಾಗಿದೆ ಎಂದು ಆರೋಪಿಸಿ ನಿರ್ಮಲಾ ಸೀತಾರಾಮನ್ ಮತ್ತು ಇತರರ ವಿರುದ್ಧ ಜನಾಧಿಕಾರ ಸಂಘರ್ಷ ಸಂಘಟನೆಯ ಆದರ್ಶ ಅಯ್ಯರ್ ಎಂಬವರು ದೂರು ದಾಖಲಿಸಲು ಅನುಮತಿ ಕೋರಿ ಕೋರ್ಟ್ನಲ್ಲಿ ಪಿಸಿಆರ್ ದಾಖಲಿಸಿದ್ದರು. ವಾದ ಪ್ರತಿವಾದ ಆಲಿಸಿದ ಬಳಿಕ ಕೇಸ್ ದಾಖಲಿಸಲು ಕೋರ್ಟ್ ಸೂಚನೆ ನೀಡಿದೆ. ಮುಂದಿನ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 10ಕ್ಕೆ ಮುಂದೂಡಿದೆ.
ಐಪಿಸಿ ಸೆಕ್ಷನ್ 156(3), 383, 120(ಬಿ) ಅಡಿ ಎಫ್‌ಐಆರ್ ದಾಖಲು ಮಾಡಲು ಬೆಂಗಳೂರಿನ ತಿಲಕ್‌ನಗರ ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿದೆ. ಆದರ್ಶ ಅಯ್ಯರ್ ಅವರು ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ)ನ ಸಹ ಅಧ್ಯಕ್ಷರಾಗಿದ್ದು, ಎಲೆಕ್ಟೋರಲ್ ಬಾಂಡ್ ಮೂಲಕ ಬೆದರಿಸಿ ಸುಲಿಗೆ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.
ಕಳೆದ ಏಪ್ರಿಲ್ನಲ್ಲಿ ಅವರು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಕೇಂದ್ರ ಸಚಿವೆ ವಿರುದ್ಧ ಮಾತ್ರವಲ್ಲದೇ ಇ.ಡಿ ಅಧಿಕಾರಿಗಳು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ನಾಯಕರ ಹೆಸರು ಉಲ್ಲೇಖ ಮಾಡಿದ್ದರು.



ನಿಮ್ಮ ಕಾಮೆಂಟ್ ಬರೆಯಿರಿ