ಬೆಂಗಳೂರು : ಬಿಜೆಪಿಯ ರಾಷ್ಟ್ರ ಮತ್ತು ರಾಜ್ಯ ಘಟಕಗಳು ಚುನಾವಣಾ ಬಾಂಡ್‌ಗಳ ಮೂಲಕ ಬಹುಕೋಟಿ ದೇಣಿಗೆ ಪಡೆಯಲು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ಬೆಂಗಳೂರಿನ ತಿಲಕ್ ನಗರ ಠಾಣೆಯಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಮತ್ತಿತರರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಕುರಿತಾದ ತನಿಖೆಗೆ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಎಫ್‌ಐಆರ್‌ನಲ್ಲಿ ಆರೋಪಿಯೂ ಆಗಿರುವ ನಳಿನಕುಮಾರ ಕಟೀಲು ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
“ಕ್ರಿಮಿನಲ್ ಕಾನೂನನ್ನು ಯಾರು ಬೇಕಾದರೂ ಚಾಲನೆ ನೀಡಬಹುದು. ಆದರೆ, ಸೆಕ್ಷನ್ 384ಕ್ಕೆ ಬಾಧಿತರು ಚಾಲನೆ ನೀಡಬಹುದು. ಇಲ್ಲಿ ದೂರುದಾರರು ಯಾರು ಎಂಬುದು ಮಹತ್ವ ಪಡೆಯಲಿದೆ. ಹಾಲಿ ಪ್ರಕರಣದಲ್ಲಿ ಕನಿಷ್ಠ ಪಕ್ಷ ಆಕ್ಷೇಪಣೆ ಸಲ್ಲಿಸುವವರೆಗೆ ತನಿಖೆ ಮುಂದುವರಿಸಲು ಅನುಮತಿಸುವುದು ಕಾನೂನಿನ ದುರ್ಬಳಕೆಯಾಗಲಿದೆ. ಹೀಗಾಗಿ, ಮುಂದಿನ ವಿಚಾರಣೆವರೆಗೆ ತನಿಖಾ ಪ್ರಕ್ರಿಯೆಗೆ ತಡೆ ವಿಧಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
ಕಟೀಲು ಪರವಾಗಿ ವಾದಿಸಿದ ಹಿರಿಯ ವಕೀಲ ಕೆ.ಜಿ. ರಾಘವನ್ ಅವರು “ಸರ್ಕಾರಿ ಸಂಸ್ಥೆಗಳನ್ನು ಬಳಕೆ ಮಾಡಿಕೊಂಡು ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದೂರು ಓದಿದರೆ ಸುಲಿಗೆ ಆರೋಪ ಅನ್ವಯಿಸದು. ದೂರು ಕ್ಷುಲ್ಲಕವಾಗಿದ್ದು, ಕಾನೂನಿನ ದುರ್ಬಳಕೆಯಾಗಿದೆ” ಎಂದು ಆಕ್ಷೇಪಿಸಿದರು.
ಪ್ರತಿವಾದಿ ಆದರ್ಶ ಅಯ್ಯರ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಶಾಂತ ಭೂಷಣ ಅವರು “ಇದು ಅತ್ಯಂತ ಸಿಂಧುವಾದ ಪ್ರಕರಣ. ಈ ಹಂತದಲ್ಲಿ ಅನುಮತಿ ಪಡೆಯಬೇಕು ಎಂಬ ವಿಚಾರ ಎತ್ತಬೇಕಿಲ್ಲ. ಸಂಜ್ಞೇ ತೆಗೆದುಕೊಳ್ಳುವ ಹಂತದಲ್ಲಿ ಅನುಮತಿ ಬೇಕಾಗುತ್ತದೆ. ಕಂಪನಿಗಳ ಮುಖ್ಯಸ್ಥರಲ್ಲಿ ಜಾರಿ ನಿರ್ದೇಶನಾಲಯದ ಮೂಲಕ ಭಯ ಹುಟ್ಟಿಸಿ, ಅವರ ಮೇಲೆ ದಾಳಿ ಇತ್ಯಾದಿ ನಡೆಸುವ ಬೆದರಿಕೆ ಹಾಕಿ ಅವರು ಚುನಾವಣಾ ಬಾಂಡ್ ಖರೀದಿಸಿ ಆಡಳಿತ ಪಕ್ಷಕ್ಕೆ ನೀಡುವಂತೆ ಮಾಡಲಾಗಿದೆ. ಆನಂತರ ಜಾರಿ ನಿರ್ದೇಶನಾಲಯ ಯಾವುದೇ ದಾಳಿ ಮಾಡಿಲ್ಲ. ಇದು ಸುಲಿಗೆಯಾಗುವುದಿಲ್ಲವೇ? ಎಂದು ವಾದಿಸಿದರು.
ನಂತರ ಪೀಠವು ಮಧ್ಯಂತರ ತಡೆಯಾಜ್ಞೆ ಮಾಡಿ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷರಾಗಿರುವ ಆದರ್ಶ ಆರ್. ಐಯ್ಯರ್ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜೆ ಪಿ ನಡ್ಡಾ, ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನಕುಮಾರ ಕಟೀಲು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 384 (ಸುಲಿಗೆ), 120ಬಿ (ಕ್ರಿಮಿನಲ್ ಪಿತೂರಿ) ಜೊತೆಗೆ 34ರ ಅಡಿ ಪ್ರಕರಣ ದಾಖಲಿಸಲು ತಿಲಕ್ ನಗರ ಪೊಲೀಸರಿಗೆ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿತ್ತು. ಇದರ ಅನ್ವಯ ಎಫ್‌ಐಆರ್ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ