ಕಾನ್ಪುರ: ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-0 ಅಂತರದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಎರಡೂ ಟೆಸ್ಟ್ ಪಂದ್ಯಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ವಿಶ್ವ ನಂ. 1 ಟೆಸ್ಟ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಮಂಗಳವಾರ (ಅಕ್ಟೋಬರ್ 1) ತಮ್ಮ 11ನೇ ಬಾರಿಗೆ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆಲ್ಲುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಅತ್ಯುತ್ತಮ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗುವ ಮೂಲಕ ಈ ದಾಖಲೆ ಸರಿಗಟ್ಟಿದ್ದಾರೆ. 38 ವರ್ಷ ವಯಸ್ಸಿನ ಸ್ಪಿನ್ನರ್ ಅಶ್ವಿನ್ ಎರಡು ಟೆಸ್ಟ್‌ಗಳ ಎರಡು ಇನ್ನಿಂಗ್ಸ್‌ಗಳಲ್ಲಿ 114 ರನ್ ಗಳಿಸಿದರು ಮತ್ತು ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಟ್ಟು 11 ವಿಕೆಟ್‌ಗಳನ್ನು ಪಡೆಯುವ ಮೂಲಕ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.
ಮುರಳೀಧರನ್ ತಮ್ಮ 18 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಶ್ರೀಲಂಕಾ ಪರ ಒಟ್ಟು 61 ಟೆಸ್ಟ್ ಸರಣಿಗಳಲ್ಲಿ 11 ಸಲ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮತ್ತೊಂದೆಡೆ, 2011ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಅಶ್ವಿನ್ ಕೇವಲ 42 ಸರಣಿಗಳಲ್ಲಿ 11 ಸಲ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆಯುವ ಮೂಲಕ ಮುರಳೀಧರನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ಸರಣಿ ಸ್ರೇಷ್ಠ ಆಟಗಾರ ಪ್ರಶಸ್ತಿಗಳನ್ನು ಪಡೆದ ಆಟಗಾರರು…
ರವಿಚಂದ್ರನ್ ಅಶ್ವಿನ್ (ಭಾರತ) – 11
ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) – 11
ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ) – 9
ಇಮ್ರಾನ್ ಖಾನ್ (ಪಾಕಿಸ್ತಾನ) – 8
ರಿಚರ್ಡ್ ಹ್ಯಾಡ್ಲೀ (ನ್ಯೂಜಿಲೆಂಡ್) – 8
ಶೇನ್ ವಾರ್ನ್ (ಆಸ್ಟ್ರೇಲಿಯಾ) – 8
ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರು ಟೆಸ್ಟ್‌ನಲ್ಲಿ ಅತಿ ಹೆಚ್ಚು ಆಟಗಾರರ ಸರಣಿ ಪ್ರಶಸ್ತಿಗಳನ್ನು ಹೊಂದಿರುವ ಭಾರತದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರಿಬ್ಬರೂ ಐದು ಬಾರಿ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್‌ನಲ್ಲಿ ಮೂರು ಆಟಗಾರರ ಸರಣಿ ಪ್ರಶಸ್ತಿಗಳನ್ನು ಹೊಂದಿದ್ದಾರೆ, ಕಪಿಲ್ ದೇವ್, ಅನಿಲ ಕುಂಬ್ಳೆ, ಹರ್ಭಜನ್ ಸಿಂಗ್ ಮತ್ತು ರಾಹುಲ್ ದ್ರಾವಿಡ್ ತಲಾ ನಾಲ್ಕು ಆಟಗಾರರ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದಾರೆ.
ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗಳನ್ನು ಪಡೆದ ಭಾರತದ ಆಟಗಾರರು…
ರವಿಚಂದ್ರನ್ ಅಶ್ವಿನ್: 11
ವೀರೇಂದ್ರ ಸೆಹ್ವಾಗ್: 5
ಸಚಿನ್ ತೆಂಡೂಲ್ಕರ್: 5
ಕಪಿಲ್ ದೇವ್: 4
ಹರಭಜನ್ ಸಿಂಗ್: 4
ರಾಹುಲ್ ದ್ರಾವಿಡ್: 4
ಅನಿಲ್ ಕುಂಬ್ಳೆ : 4
ಮೊಹಮ್ಮದ್ ಅಜರುದ್ದೀನ್: 3
ಜಹೀರ್ ಖಾನ್: 3
ವಿರಾಟ್ ಕೊಹ್ಲಿ: 3
ಸೌರವ್ ಗಂಗೂಲಿ: 3
ಇಶಾಂತ್ ಶರ್ಮಾ: 3
ಬಾಂಗ್ಲಾದೇಶದ ವಿರುದ್ಧ ಚೆನ್ನೈಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಆರು ವಿಕೆಟ್ ಸಾಧನೆ ಮಾಡಿದ್ದ ಅಶ್ವಿನ್, ಕಾನ್ಪುರದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಒಟ್ಟು ಐದು ವಿಕೆಟ್ ಗಳಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ