ದುರ್ಬಳಕೆ ಕಡಿವಾಣಕ್ಕೆ ಬಿಪಿಎಲ್ ಪಡಿತರ ಕಾರ್ಡ್‌ ಮಾನದಂಡ ಪರಿಶೀಲನೆಗೆ ಸಮಿತಿ ರಚನೆ : ದೇಶಪಾಂಡೆ

ಬೆಂಗಳೂರು: ಬಡತನದ ರೇಖೆಗಿಂತ ಕೆಳಗೆ (ಬಿಪಿಎಲ್) ಇರುವ ಕುಟುಂಬಗಳಿಗೆ ಪಡಿತರ ಚೀಟಿ ವಿತರಣಾ ಮಾನದಂಡ ಪರಿಶೀಲನೆಗೆ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಲಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಪಿಎಲ್ ಪಡಿತರ ಚೀಟಿ ದುರ್ಬಳಕೆಗೆ ಕಡಿವಾಣ ಹಾಕುವುದು, ಸರ್ಕಾರದ ಬೊಕಸಕ್ಕೆ ಅನಗತ್ಯ ವೆಚ್ಚ ತಗ್ಗಿಸುವುದು, ಅರ್ಹರಿಗೆ ಈ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಸಹ ಬಿಪಿಎಲ್ ಕಾರ್ಡ್‌ ಹೊಂದಿರುವ ದೂರುಗಳು ಗಮನಕ್ಕೆ ಬಂದಿವೆ. ಉಪಸಮಿತಿಯು ಬಿಪಿಎಲ್ ಪಡಿತರ ಚೀಟಿ ಮಾನದಂಡಗಳನ್ನು ಪರಿಶೀಲಿಸಲಿದೆ ಎಂದರು.
ಕೆಲವು ಇಲಾಖೆಗಳು ನಿಗಮ– ಮಂಡಳಿಗಳನ್ನು ವಿಲೀನಗೊಳಿಸುವ ಸಾಧ್ಯತೆ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. 160 ನಿಗಮ-ಮಂಡಳಿಗಳ ಪೈಕಿ 53 ಮಾತ್ರ ಆರ್ಥಿಕವಾಗಿ ಲಾಭದಲ್ಲಿವೆ. ಉಳಿದ 107 ನಿಗಮ-ಮಂಡಳಿಗಳಿಗೆ ಬಲವರ್ಧನೆ ಅಥವಾ ವಿಲೀನದಂತಹ ಕ್ರಮದ ಅಗತ್ಯವಿದೆ. ಆರ್ಥಿಕವಾಗಿ ಬಲಪಡಿಸಿ ಲಾಭದ ಹಳಿಗೆ ತರಬಹುದಾದ ನಿಗಮ– ಮಂಡಳಿಗಳನ್ನು ಗುರುತಿಸಿ ಬಲವರ್ಧನೆಗೆ ಕೈಗೊಳ್ಳಬೇಕಾದ ಕ್ರಮಗಳು ಬೊಕ್ಕಸಕ್ಕೆ ಹೊರೆಯಾದ ನಿಗಮ-ಮಂಡಳಿಗಳ ವಿಲೀನದ ಕುರಿತು ಸಲಹೆ ನೀಡಲು ಚಿಂತನೆ ನಡೆದಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಕಚೇರಿಗಳಿಗೆ ಜನರ ಅಲೆದಾಟ ತಪ್ಪಿಸಲು 19 ಇಲಾಖೆಗಳಿಗೆ ಸಂಬಂಧಿಸಿದ 2,871 ಶಿಫಾರಸುಗಳನ್ನು ಆಯೋಗ ಮಾಡಿದೆ. ಅವುಗಳಲ್ಲಿ 853 ಶಿಫಾರಸುಗಳನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ. 592 ಶಿಫಾರಸುಗಳು ಅನುಷ್ಠಾನದ ಹಂತದಲ್ಲಿದ್ದು, ಸರ್ಕಾರದ ಮಟ್ಟದಲ್ಲಿ 243, ಇಲಾಖಾ ಮಟ್ಟದಲ್ಲಿ 1181 ಶಿಫಾರಸುಗಳು ಬಾಕಿ ಇವೆ. ಇವುಗಳನ್ನು ತಿಂಗಳಲ್ಲಿ ಅನುಷ್ಠಾನಕ್ಕೆ ತರಲು ನಿರ್ದೇಶನ ನೀಡಲಾಗಿದೆ ಎಂದರು.
2024ರ ಜನವರಿ ಅಂತ್ಯದ ವೇಳೆಗೆ ಆಯೋಗ 39 ಇಲಾಖೆಗಳನ್ನು ಒಳಗೊಂಡು ಒಟ್ಟು 7 ವರದಿಗಳನ್ನು ಸರ್ಕಾರಕ್ಕೆ ನೀಡಿದೆ. ಈ ವರದಿಗಳು 5039 ಶಿಫಾರಸುಗಳನ್ನು ಒಳಗೊಂಡಿತು. ಜನವರಿ ಅಂತ್ಯದವರೆಗೆ ಕೇವಲ 99 ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲಾಗಿತ್ತು. ನಿರಂತರವಾಗಿ ಸರಕಾರದ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಇತರರಿಗೆ ನಿರಂತರವಾಗಿ ಪತ್ರ ಬರೆದು ಹೆಚ್ಚು ಶಿಫಾರಸುಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement