ದಸರಾ ಹಬ್ಬ : ಕೆಎಸ್‌ಆರ್‌ಟಿಸಿಯಿಂದ 2000ಕ್ಕೂ ಹೆಚ್ಚು ವಿಶೇಷ ಬಸ್ ವ್ಯವಸ್ಥೆ

ಬೆಂಗಳೂರು: ಮೈಸೂರು ದಸರಾ-2024 ಮತ್ತು ದಸರಾ ರಜೆಗಳ ಪ್ರಯುಕ್ತ ಕೆಎಸ್‌ಆರ್‌ಟಿಸಿ 2000ಕ್ಕೂ ರಾಜ್ಯ ಮತ್ತು ಹೊರಾಜ್ಯಗಳ ವಿವಿಧ ಸ್ಥಳಗಳಿಗೆ 2,000ಕ್ಕೂ ಹೆಚ್ಚು ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ.
ಅಕ್ಟೋಬರ್‌ 9ರಿಂದ 12ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರದೇಶಗಳಿಗೆ ಹಾಗೂ ಅಕ್ಟೋಬರ್‌ 13 ಮತ್ತು 14ರಂದು ವಿವಿಧ ಪ್ರದೇಶಗಳಿಂದ ಬೆಂಗಳೂರಿಗೆ ಈ ವಿಶೇಷ ಬಸ್‌ಗಳ ಕಾರ್ಯಾಚರಣೆ ನಡೆಸಲಿದೆ.
ಕರ್ನಾಟಕ ಸಾರಿಗೆ (ವೇಗದೂತ), ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಇ.ವಿ ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಸಾರಿಗೆ ಸೇವೆಗಳ ಜೊತೆಗೆ ಹೆಚ್ಚುವರಿ ಬಸ್‌ಗಳ ಸಂಚಾರ ಇರಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್‌ಗಳು ಹೊರಡಲಿವೆ. ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಕೊಲ್ಲೂರು, ಗೋಕರ್ಣ, ವಿವಿಧ ಜಿಲ್ಲಾ ಕೇಂದ್ರಗಳು ಹಾಗೂ ನೆರೆ ರಾಜ್ಯಗಳ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪುಣೆ, ಎರ್ನಾಕುಲಂ, ಪಾಲ್‌ಘಾಟ್ ಹಾಗೂ ಇತರೆ ಸ್ಥಳಗಳಿಗೆ ವಿಶೇಷ ಬಸ್‌ಗಳ ಕಾರ್ಯಾಚರಣೆ ಇರಲಿದೆ.

ಪ್ರಮುಖ ಸುದ್ದಿ :-   ಬೆಂಗಳೂರು | ವಿದ್ಯಾರ್ಥಿಯ ಹಲ್ಲು ಮುರಿದ ಶಿಕ್ಷಕಿ : ಪ್ರಕರಣ ದಾಖಲು

ದಸರಾಕ್ಕೆ 660 ವಿಶೇಷ ಬಸ್‌…:
ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 260 ಹೆಚ್ಚುವರಿ ವಾಹನಗಳ ಕಾರ್ಯಾಚರಣೆ ಇರಲಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ‘ಫ್ಲೈ ಬಸ್’ ಮೂಲಕ ನೇರ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಮೈಸೂರಿನಲ್ಲಿ ಗಿರಿದರ್ಶಿನಿ, ಜಲದರ್ಶಿನಿ, ದೇವದರ್ಶಿನಿ ವಿಶೇಷ ಪ್ರವಾಸ ಕಾರ್ಯಾಚರಣೆ ಇರಲಿದೆ.
ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಕೆ.ಆರ್.ಎಸ್. ಅಣೆಕಟ್ಟು, ಶ್ರೀರಂಗಪಟ್ಟಣ, ನಂಜನಗೂಡು ಸೇರಿದಂತೆ ಮಡಿಕೇರಿ, ಮಂಡ್ಯ, ಮಳವಳ್ಳಿ, ಎಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆಗೂ ಸಾರಿಗೆ ಸಂಪರ್ಕ ಕಲ್ಪಿಸಲು 400 ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ.
www.ksrtc.karnataka.gov.in ವೆಬ್‌ಸೈಟ್ ಅಥವಾ ಮೊಬೈಲ್ ಮೂಲಕ ಇ-ಟಿಕೆಟ್‌ ಕಾಯ್ದಿರಿಸಬಹುದು. ಮೈಸೂರು ಗ್ರಾಮಾಂತರ, ನಗರ ಬಸ್ ನಿಲ್ದಾಣದಲ್ಲಿ ಪ್ರತ್ಯೇಕವಾಗಿ ‘ಮಾಹಿತಿ ಕೇಂದ್ರ’ ತೆರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement