ಉಡುಪಿ : ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕೆಲವೆಡೆ ಭಾನುವಾರ ಮೇಘ ಸ್ಫೋಟ ಸಂಭವಿಸಿದ್ದು, ಧಾರಾಕಾರ ಮಳೆಯಿಂದ ದಿಢೀರ್ ಪ್ರವಾಹ ಉಂಟಾಗಿ ಜನ ನಲುಗಿ ಹೋದ ಘಟನೆ ನಡೆದಿದೆ.
ಭಾನುವಾರ ಮಧ್ಯಾಹ್ನ 3:30 ರಿಂದ ಸಂಜೆ 4:30 ವರೆಗೆ ‘ಭಾರೀ ಗುಡುಗು- ಸಿಡಿಲು ಸಹಿತ ಮಳೆಯಾಗಿದ್ದು ದಿಢೀರ್ ಮೇಘ ಸ್ಫೋಟದಿಂದ ಭಾರೀ ಮಳೆ ಸುರಿದಿದೆ. ಮುದ್ರಾಡಿ ಬಳಿಯ ಬಲ್ಲಾಡಿ, ಕಂತಾರ್ ಬೈಲು ಗ್ರಾಮದ ಜನ ಮಳೆಯಿಂದ ತತ್ತರಿಸಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಕಾರು, ದನಕರುಗಳು, ಅಡಿಕೆ ಮರಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.
ಏಕಾಏಕಿ ಮೇಘ ಸ್ಪೋಟದಿಂದ ಪ್ರವಾಹ ಸಂಭವಿಸಿದೆ. ಮುದ್ರಾಡಿಯ ಹೊಸ ಕಂಬ್ಲ, ಕಾಂತರಬೈಲಿನಲ್ಲಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ಮನೆಗಳು ಅರ್ಧ ಮುಳುಗಿದ್ದು, ಮನೆಮಂದಿಯನ್ನು ಹಗ್ಗಕಟ್ಟಿ ಏಣಿಯ ಸಹಾಯದಿಂದ ಹೊರ ಕರೆತರಲಾಗಿದೆ ಎಂದು ವರದಿಯಾಗಿದೆ.
ಬಲ್ಲಾಡಿಯ ಈಶ್ವರ ನಗರ ಬಳಿಯ ಬಮ್ಮಗುಂಡಿ ಹೊಳೆ ಮೇಘ ಸ್ಫೋಟದಿಂದ ಉಕ್ಕಿ ಹರಿದಿದೆ. ಇದರ ಪರಿಣಾಮ ಪ್ರವಾಹ ನೇರವಾಗಿ ಮನೆಗಳಿಗೆ ನುಗ್ಗಿದೆ. ಭಾರಿ ನೆರೆಯಿಂದ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಕಾರು, ಎರಡು ಬೈಕುಗಳು ಕೊಚ್ಚಿಕೊಂಡು ಹೋಗಿವೆ.
ಕೇರಳ ಮೂಲದ ವ್ಯಕ್ತಿಗೆ ಸೇರಿರುವ ರಬ್ಬರ್ ತೋಟಕ್ಕೂ ನೀರು ನುಗ್ಗಿದೆ. ಮನೆಯವರು ಮತ್ತು ಗ್ರಾಮಸ್ಥರು ಕೊಚ್ಚಿಕೊಂಡು ಹೋಗುತ್ತಿರುವ ವಾಹನಗಳ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಪ್ರವಾಹ ಯಾವ ರೀತಿಯಲ್ಲಿ ಇದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಕಬ್ಬಿನಾಲೆ ಭಾಗದ ಪರ್ವತ ಶ್ರೇಣಿಯಲ್ಲಿ ಈ ಮೇಘ ಸ್ಫೋಟವಾಗಿ ಪ್ರವಾಹ ಸೃಷ್ಟಿಯಾಗಿದ್ದು ತಮ್ಮ ಜೀವಮಾನದಲ್ಲೇ ಇಂಥ ಭೀಕರ ಪ್ರವಾಹ ನೋಡಿಲ್ಲವೆಂದು ನಾಗರಿಕರು ಪ್ರತಿಕ್ರಿಯೆ ನೀಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ