ಕೋಲ್ಕತ್ತಾ : ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯನಿರತ ತರಬೇತಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾನೆ ಎಂದು ಕೋಲ್ಕತ್ತಾ ಪೊಲೀಸರೊಂದಿಗೆ ಗುತ್ತಿಗೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಸಂಜೋಯ ರಾಯ್ ವಿರುದ್ಧ ಸಿಬಿಐ ಆರೋಪ ಹೊರಿಸಿದೆ. ಸೋಮವಾರ ಮಧ್ಯಾಹ್ನ ಸೀಲ್ದಾಹ್‌ನಲ್ಲಿರುವ ವಿಶೇಷ ನ್ಯಾಯಾಲಯದಲ್ಲಿ ಕೇಂದ್ರೀಯ ಸಂಸ್ಥೆ ಆರೋಪಪಟ್ಟಿ ಸಲ್ಲಿಸಲಿದೆ.
ವಿರಾಮದ ವೇಳೆ ವೈದ್ಯೆ ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಲು ಹೋದಾಗ ಆರೋಪಿ ಅಪರಾಧ ಎಸಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಮೂಲಗಳ ಪ್ರಕಾರ ಸಂಜೋಯ ರಾಯ್ ನನ್ನು ಪ್ರಮುಖ ಆರೋಪಿ ಎಂದು ಹೆಸರಿಸಿರುವ ಚಾರ್ಜ್ ಶೀಟ್‌ನಲ್ಲಿ ಸುಮಾರು 200 ಜನರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಪ್ರಕರಣ ಇನ್ನೂ ತನಿಖೆಯಲ್ಲಿದೆ ಎಂದು ತಿಳಿಸಲಾಗಿದೆ.
ಆಗಸ್ಟ್ 9 ರಂದು ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು ಮತ್ತು ನಂತರದ ತನಿಖೆಗಳು ಸಂತ್ರಸ್ತೆ ಅನುಭವಿಸಿದ ಭಯಾನಕತೆಯನ್ನು ಬಹಿರಂಗಪಡಿಸಿದವು. ದೇಶವ್ಯಾಪಿ ಪ್ರತಿಭಟನೆಗಳು ಜೋರಾದ ನಡುವೆಯೇ ಕಲ್ಕತ್ತಾ ಹೈಕೋರ್ಟ್ ಸಿಬಿಐ ತನಿಖೆಗೆ ವಹಿಸಿ ಆದೇಶಿಸಿತ್ತು.
ಆಸ್ಪತ್ರೆಗೆ ಆಗಾಗ್ಗೆ ಬರುತ್ತಿದ್ದ ರಾಯ್ ನನ್ನು ಒಂದು ದಿನದ ನಂತರ ಕೋಲ್ಕತ್ತಾ ಪೊಲೀಸರು ಬಂಧಿಸಿದರು. ನಂತರ ಅವರು ಇತರ ಸಾಕ್ಷ್ಯಗಳೊಂದಿಗೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದರು.
ಕಾಲೇಜಿನ ಅಂದಿನ ಪ್ರಾಂಶುಪಾಲರಾದ ಸಂದೀಪ ಘೋಷ್ ಅವರನ್ನೂ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ ಎರಡು ವಿಭಿನ್ನ ಹಣಕಾಸು ಅಕ್ರಮಗಳು ಮತ್ತು ಸಾಕ್ಷ್ಯಾಧಾರಗಳನ್ನು ತಿರುಚಿದ ಪ್ರಕರಣಗಳಲ್ಲಿ ಬಂಧಿಸಿವೆ. ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಸಂತ್ರಸ್ತೆಯ ಸಹೋದ್ಯೋಗಿಗಳು ಇದೀಗ ಆರ್‌ಜಿ ಕರ್ ಪ್ರಕರಣದಲ್ಲಿ ನ್ಯಾಯ ಬೇಕು ಮತ್ತು ವೈದ್ಯರ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ