ರಾಮನಗರ ಪಾಲನಹಳ್ಳಿ ಮಠಕ್ಕೆ 3 ಸಾವಿರ ಎಕರೆ ಭೂಮಿ ದಾನ ಮಾಡಿ ಸನ್ಯಾಸ ಸ್ವೀಕರಿಸಲು ನಿರ್ಧರಿಸಿದ ರಾಜಸ್ಥಾನ ಗಣಿ ಉದ್ಯಮಿ

ರಾಮನಗರ : ರಾಜಸ್ಥಾನದ 78 ವರ್ಷದ ಗಣಿ ಉದ್ಯಮಿ ಪಿ.ಬಿ. ಓಸ್ವಾಲ್‌ ಜೈನ್‌ ಅವರು ಸಾವಿರಾರು ಕೋಟಿ ರೂ. ಮೌಲ್ಯದ ಸ್ವಯಾರ್ಜಿತ ಆಸ್ತಿ ಹಾಗೂ 3 ಸಾವಿರ ಎಕರೆಯ ಭೂಮಿಯನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಪಾಲನಹಳ್ಳಿಯ ಶ್ರೀ ಶನೈಶ್ಚರ ಮಠಕ್ಕೆ ದಾನ ಮಾಡಿದ್ದು, ಜೈನ ಸನ್ಯಾಸ ದೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ಓಸ್ವಾಲ್‌ ಜೈನ್‌ ಅವರು ವಿವಿಧ ಕಂಪೆನಿಗಳು ಹಾಗೂ ಕರ್ನಾಟಕ, ಮುಂಬಯಿ, ತಮಿಳುನಾಡು, ರಾಜಸ್ಥಾನ, ಗುಜರಾತ್‌, ಆಂಧ್ರಪ್ರದೇಶದಲ್ಲಿಯ ಆಸ್ತಿ ಹಾಗೂ 3 ಸಾವಿರ ಎಕರೆ ಕಲ್ಲಿದ್ದಲು ಭೂಮಿ, ಅದಿರಿನ ಗಣಿಗಳ ಜತೆಗೆ ವಿದೇಶಗಳಲ್ಲಿ ವಹಿವಾಟುಗಳನ್ನು ಶ್ರೀ ಶನೈಶ್ಚರ ಮಠದ ಡಾ. ಸಿದ್ದರಾಜು ಸ್ವಾಮೀಜಿಗೆ ಹಸ್ತಾಂತರ ಮಾಡಿದ್ದಾರೆ.

ರಾಜಸ್ಥಾನದ ಗಣಿ ಉದ್ಯಮಿಯಾಗಿರುವ ಓಸ್ವಾಲ್‌ ಜೈನ್‌ಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ವಿದೇಶದಲ್ಲಿದ್ದರೆ, ಮಗಳು ರಾಜಸ್ಥಾನದಲ್ಲಿ ಸಿಎ ವೃತ್ತಿಯಲ್ಲಿದ್ದಾಳೆ. ಅವರಿಗೆ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿ ನೀಡಿರುವ ಓಸ್ವಾಲ್‌ ಜೈನ್‌ ಅವರು, ಸ್ವಯಾರ್ಜಿತ ಆಸ್ತಿಯಾಗಿರುವ 3 ಸಾವಿರ ಎಕರೆ ಆಸ್ತಿಯನ್ನು ಮಠಕ್ಕೆ ದಾನ ಮಾಡಿದ್ದಾರೆ. ಎಲ್ಲಾ ಪ್ರಕ್ರಿಯೆಗಳನ್ನು ಕಾನೂನಾತ್ಮಕವಾಗಿ ಮಾಡಲಾಗಿದೆ ಎಂದು ಪಿ.ಬಿ. ಓಸ್ವಾಲ್‌ ಜೈನ್‌ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಡಿಸೆಂಬರ್ 17 ರಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ : ಮುನ್ಸೂಚನೆ

ಓಸ್ವಾಲ್‌ ಕಂಪನಿ ಆರಂಭವಾದಾಗಿನಿಂದ ಸತತ 27 ವರ್ಷಗಳಿಂದ ಪಾಲನಹಳ್ಳಿ ಮಠದ ಶ್ರೀಗಳ ಮಾರ್ಗದರ್ಶನ ಪಡೆದಿದ್ದೇನೆ ಮತ್ತು ಒಡನಾಟವಿದ್ದ ಕಾರಣ ಡಾ. ಸಿದ್ದರಾಜು ಸ್ವಾಮೀಜಿ ಅವರ ಜನೋಪಯೋಗಿ, ಸೇವಾ ಕಾರ್ಯಗಳನ್ನು ಗಮನಿಸಿದ್ದೇನೆ. ಆದ್ದರಿಂದ ಆಸ್ತಿಯನ್ನು ಮಠಕ್ಕೆ ದಾನ ಮಾಡಿದ್ದೇನೆ. ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದೇನೆ ಎಂದು ಪಿಬಿ ಓಸ್ವಾಲ್‌ ಜೈನ್‌ ಹೇಳಿದ್ದಾರೆ.
ಕಾನೂನಾತ್ಮಕವಾಗಿ ಆಸ್ತಿ ಮಠಕ್ಕೆ ವರ್ಗಾವಣೆಯಾದ ಬಳಿಕ ಮಠದ ಆಡಳಿತ ಮಂಡಳಿ, ಆದಾಯ ತೆರಿಗೆ ಆಯುಕ್ತರೊಂದಿಗೆ ಚರ್ಚಿಸಿ ಗಣಿ ವಹಿವಾಟಿನ ಆದಾಯದಿಂದ ಮಠದ ನಿರ್ವಹಣೆ, ಶಾಲೆ, ಕಾಲೇಜು, ಆಸ್ಪತ್ರೆ, ಗೋಶಾಲೆ, ದೇಗುಲ, ಗೋಶಾಲೆ, ಬಡವರಿಗೆ ಮನೆ ನಿರ್ಮಾಣ ಮಾಡಲಾಗುವುದು ಎಂದು ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ. ಸಿದ್ದರಾಜ ಸ್ವಾಮೀಜಿ ಹೇಳಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement