ಉಡುಪಿ: ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಏಳು ಬಾಂಗ್ಲಾದೇಶದ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಲ್ಪೆಯ ವಡಬಾಂಡೇಶ್ವರದ ಬಸ್ ನಿಲ್ದಾಣದ ಬಳಿ ಇವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ಅಕ್ರಮವಾಗಿ ನೆಲೆಸಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಇವರು ಸುಮಾರು 3 ವರ್ಷಗಳಿಂದ ಅಕ್ರಮವಾಗಿ ಮಲ್ಪೆಯಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದ ಪ್ರಜೆಗಳಾದ ಹಕೀಂ, ಸುಜೋನ್ ಎಸ್.ಕೆ., ಇಸ್ಮಾಯಿಲ್ ಎಸ್.ಕೆ. , ಕರೀಂ ಎಸ್.ಕೆ., ಸಲಾಂ ಎಸ್.ಕೆ., ರಾಜಿಕುಲ್ ಎಸ್.ಕೆ.,ಮೊಹಮ್ಮದ್ ಸೋಜುಬ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.
ಇವರಿಗೆ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಟ್ಟಿರುವ ಆರೋಪದಲ್ಲಿ ಸಿಕ್ಕಿಂನ ಅಗರ್ತಲಾದ ಕಾಜೋಲ್ ಹಾಗೂ ಇವರನ್ನು ಕೆಲಸಕ್ಕೆ ಕರೆ ತಂದಿದ್ದ ಬಾಂಗ್ಲಾದೇಶದ ಉಸ್ಮಾನ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
‘ನಕಲಿ ಪಾಸ್‌ಪೋರ್ಟ್ ಬಳಸಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ದುಬೈಗೆ ಹೋಗಲು ಯತ್ನಿಸುತ್ತಿದ್ದ ಮೊಹಮ್ಮದ್ ಮಾಣಿಕ್ ಎಂಬಾತ ವಲಸೆ ವಿಭಾಗದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ. ನಂತರ ಅವರು ಆತನನ್ನು ಬಜ್ಪೆ ಪೊಲೀಸರಿಗೊಪ್ಪಿಸಿದ್ದರು. ಆತನನ್ನು ವಿಚಾರಣೆ ನಡೆಸಿದಾಗ ಮಲ್ಪೆಯ ಹೂಡೆಯಲ್ಲಿ ಬಾಂಗ್ಲಾದೇಶೀಯರು ಅಕ್ರಮವಾಗಿ ನೆಲೆಸಿರುವ ಮಾಹಿತಿ ದೊರಕಿದೆ. ಅದರಂತೆ 7 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ.ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ