ನವದೆಹಲಿ : ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ ಅವರ ಆಶ್ರಮ ಸೇರುವಂತೆ ತನ್ನ ಇಬ್ಬರು ಹೆಣ್ಣುಮಕ್ಕಳನ್ನು “ಬ್ರೇನ್ ವಾಶ್” ಮಾಡಿ ಅವರನ್ನು ಬಲವಂತವಾಗಿ ಬಂಧಿಸಿ ಇರಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ಈಶಾ ಫೌಂಡೇಷನ್ ವಿರುದ್ಧ ನೀಡಿದ್ದ ದೂರಿನ ಅಡಿಯಲ್ಲಿ ನಡೆಯುತ್ತಿದ್ದ ಎಲ್ಲ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಗೀತಾ ಮತ್ತು ಲತಾ ಇಬ್ಬರೂ ವಯಸ್ಕರು ಮತ್ತು ಅವರ ಸ್ವಂತ ಇಚ್ಛೆಯ ಆಶ್ರಮದಲ್ಲಿ ವಾಸಿಸುತ್ತಿರುವ ಕಾರಣ ಕಾನೂನುಬಾಹಿರ ಬಂಧನವನ್ನು ಪ್ರತಿಪಾದಿಸುವ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠವು ತೀರ್ಪು ನೀಡಿದೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಈಶಾ ಪ್ರತಿಷ್ಠಾನದ ಆಶ್ರಮದಲ್ಲಿ ತಾವು ಸ್ವಯಂ ಇಚ್ಛೆಯಿಂದ ಇರುವುದಾಗಿ ಮತ್ತು ತಮ್ಮನ್ನು ಯಾರೂ ಬಲವಂತವಾಗಿ ಇರಿಸಿಕೊಂಡಿಲ್ಲ ಎಂದು ಇಬ್ಬರೂ ಮಹಿಳೆಯರು ವೀಡಿಯೊ ಕಾನ್ಫರೆನ್ಸ್ ಮೂಲಕ ಸುಪ್ರೀಂ ಕೋರ್ಟ್ ಪೀಠದ ಮುಂದೆ ಹೇಳಿಕೆ ನೀಡಿದ್ದರು. ಇದನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದ್ದು, ತಂದೆಯ ವಾದವನ್ನು ತಿರಸ್ಕರಿಸಿದೆ. ಆದಾಗ್ಯೂ, ಈ ಆದೇಶವು ಈ ಪ್ರಕರಣಕ್ಕೆ ಮಾತ್ರ ಸೀಮಿತ ಎಂದು ಹೇಳಿದೆ.
ಎಂಟು ವರ್ಷಗಳ ಹಿಂದೆ, ಮಹಿಳೆಯ ತಾಯಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು ಮತ್ತು ಈಗ ತಂದೆ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಕಳೆದ ವಿಚಾರಣೆ ವೇಳೆ ಮಹಿಳೆಯರೊಂದಿಗೆ ವೈಯಕ್ತಿಕವಾಗಿ ಮಾತನಾಡಿರುವುದಾಗಿ ಪೀಠ ಹೇಳಿತು.
“ನಾವು ಇಬ್ಬರೂ ಮಹಿಳೆಯರೊಂದಿಗೆ ಮಾತನಾಡಿದ್ದೇವೆ ಮತ್ತು ಅವರ ಹೇಳಿಕೆಯನ್ನು ರೆಕಾರ್ಡ್ ಮಾಡಿದ್ದೇವೆ. ಇಬ್ಬರೂ ಸ್ವ ಇಚ್ಛೆಯಿಂದ ಅಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದಾರೆ. ಹೀಗಾಗಿ ನಾವು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ರದ್ದುಗೊಳಿಸುತ್ತೇವೆ ಎಂದು ಸಿಜೆಐ ಚಂದ್ರಚೂಡ ಹೇಳಿದರು.
ಆಶ್ರಮಕ್ಕೆ ಸೇರಿದಾಗ ಹೆಣ್ಣು ಮಕ್ಕಳಿಬ್ಬರೂ 27 ಮತ್ತು 24 ವರ್ಷದವರಾಗಿದ್ದು, ಅವರು ಅಪ್ರಾಪ್ತ ವಯಸ್ಸಿನವರಾಗಿರಲಿಲ್ಲ ಮತ್ತು ಅವರು ಹೈಕೋರ್ಟಿಗೆ ಹಾಜರಾಗಿದ್ದರು. ಅವರು ತಮ್ಮ ಪೋಷಕರ ಜತೆ ನಿರಂತರ ಸಂಪರ್ಕದಲ್ಲಿಯೂ ಇದ್ದಾರೆ” ಎಂದು ವಾದಿಸಿದ್ದರು. ಅದು ಒಮ್ಮೆ ಸಾಬೀತಾದಾಗ, ಹೇಬಿಯಸ್ ಕಾರ್ಪಸ್ ಕೇಸ್‌ನಲ್ಲಿ ಮುಂದಿನ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಈ ಕುರಿತು ತನಿಖೆಗೆ ಆದೇಶಿಸಿತ್ತು. ಇದರ ಬೆನ್ನಲ್ಲೇ ಕೊಯಮತ್ತೂರು ಪೊಲೀಸರು ಆಶ್ರಮದ ಮೇಲೆ ದಾಳಿ ನಡೆಸಿದ್ದರು. ಇದನ್ನು ಸಂಪೂರ್ಣ ಅಸಮರ್ಪಕ ಕ್ರಮ ಎಂದು ಸುಪ್ರೀಂ ಕೋರ್ಟ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ