ಕಾಶ್ಮೀರ | ಉಗ್ರರ ದಾಳಿಯಲ್ಲಿ ಸತ್ತವರ ಸಂಖ್ಯೆ ಏರಿಕೆ ; ವೈದ್ಯ, ಐವರು ವಲಸಿಗ ಕಾರ್ಮಿಕರು ಸೇರಿ 6 ಮಂದಿ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಗಂಡರ್ಬಾಲ್ ಜಿಲ್ಲೆಯ ಗಗಾಂಗೀರ್‌ ನಲ್ಲಿ ಭಾನುವಾರ (ಅಕ್ಟೋಬರ್‌ 20) ನಡೆದ ಭಯೋತ್ಪಾದಕರ ದಾಳಿಯಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿದೆ.
ಭಯೋತ್ಪಾದಕರ ದಾಳಿಯಲ್ಲಿ ವೈದ್ಯ, ಐವರು ವಲಸಿಗ ಕಾರ್ಮಿಕರು ಸೇರಿದಂತೆ ಕನಿಷ್ಠ 6 ಮಂದಿ ಸಾವಿಗೀಡಾಗಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
6 ಮಂದಿ ಸಾವಿಗೀಡಾಗಿರುವುದನ್ನು ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಸಾವು-ನೋವುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ. ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಪ್ರದೇಶವನ್ನು ಸುತ್ತುವರಿದಿದ್ದಾರೆ. ಗುಂಡ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಕಾರ್ಮಿಕರು ನೆಲೆಸಿರುವ ಶಿಬಿರದ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಲಷ್ಕರ್-ಎ-ತೈಬಾ (LeT)ಯ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಈ ದಾಳಿಯನ್ನು ನಡೆಸಿದೆ ಎಂದು ಶಂಕಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಮೊದಲ ಬಾರಿಗೆ ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಈ ದಾಳಿಯನ್ನು ಖಂಡಿಸಿದ್ದಾರೆ. ಮೃತರು ಪ್ರಮುಖ ಕಟ್ಟಡವೊಂದರ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ.
2 ದಿನಗಳ ಹಿಂದೆಯಷ್ಟೇ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಝೈನಾಪೊರಾದ ವದುನಾ ಪ್ರದೇಶದಲ್ಲಿ ಉಗ್ರರ ದಾಳಿಗೆ ನಾಗರಿಕರೊಬ್ಬರು ಬಲಿಯಾಗಿದ್ದರು. ʼʼಸ್ಥಳೀಯರಲ್ಲದ ವ್ಯಕ್ತಿಯ ಮೃತದೇಹ ಕಂಡು ಬಂದಿದೆ. ದೇಹದಲ್ಲಿ ಅನೇಕ ಗುಂಡಿನ ಗಾಯಗಳಿವೆʼʼ ಎಂದು ಅಧಿಕಾರಿಗಳು ಶುಕ್ರವಾರ (ಅಕ್ಟೋಬರ್‌ 18) ತಿಳಿಸಿದ್ದರು.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement