ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಮಹಾ ವಿಕಾಸ್ ಅಘಾಡಿ ಪಕ್ಷಗಳ ನಡುವೆ 85-85-85 ಸೀಟುಗಳ ಹಂಚಿಕೆ

ಮುಂಬೈ: ಕಾಂಗ್ರೆಸ್, ಎನ್‌ಸಿಪಿ (ಎಸ್‌ಪಿ) ಮತ್ತು ಶಿವಸೇನೆ (ಯುಬಿಟಿ) ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ ಬುಧವಾರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ತನ್ನ ಸೀಟು ಹಂಚಿಕೆ ಒಪ್ಪಂದಕ್ಕೆ ಬಂದಿವೆ. ಮಿತ್ರಪಕ್ಷಗಳು ತಲಾ 85 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ, ಅಂತಿಮ ಒಪ್ಪಂದಕ್ಕೆ ಮುದ್ರೆಯೊತ್ತಲು ಇನ್ನೂ ಚರ್ಚೆಗಳು ನಡೆಯುತ್ತಿವೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವಸೇನಾ (ಯುಬಿಟಿ) ಸಂಸದ ಸಂಜಯ ರಾವತ್, ನವೆಂಬರ್ 20 ರ ಚುನಾವಣೆಗೆ ಒಟ್ಟು 288 ಸ್ಥಾನಗಳಲ್ಲಿ 270 ಸ್ಥಾನಗಳಲ್ಲಿ ಪಕ್ಷಗಳು ಒಮ್ಮತಕ್ಕೆ ಬಂದಿವೆ. ಉಳಿದ ಸ್ಥಾನಗಳನ್ನು ಸಣ್ಣ ಪಕ್ಷಗಳಿಗೆ ಬಿಡಲಾಗುವುದು ಎಂದು ಹೇಳಿದ್ದಾರೆ.
“ನಾವು ಸಮಾಜವಾದಿ ಪಕ್ಷ (ಎಸ್‌ಪಿ), ಪಿಡಬ್ಲ್ಯೂಪಿ (ಪೇಸೆಂಟ್ಸ್ ಅಂಡ್ ವರ್ಕರ್ಸ್ ಪಾರ್ಟಿ ಆಫ್ ಇಂಡಿಯಾ), ಸಿಪಿಐ(ಎಂ), ಸಿಪಿಐ ಮತ್ತು ಎಎಪಿಯನ್ನು ಸೇರಿಸಿಕೊಳ್ಳುತ್ತೇವೆ. ಉಳಿದ ಸ್ಥಾನಗಳ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಸೌಹಾರ್ದಯುತವಾಗಿ 270 ಸ್ಥಾನಗಳಿಗೆ ಒಮ್ಮತಕ್ಕೆ ಬಂದಿದ್ದೇವೆ. ಮಹಾಯುತಿ ಸರ್ಕಾರವನ್ನು ಸೋಲಿಸಲು ಎಂವಿಎ (MVA) ಒಗ್ಗಟ್ಟಾಗಿದೆ ಎಂದು ರಾವತ್‌ ಹೇಳಿದರು.

ಸೀಟುಗಳ ವಿಭಜನೆ ಹೇಗಿರುತ್ತದೆ?
ಮಹಾ ವಿಕಾಸ್ ಅಘಾಡಿ (ಎಂವಿಎ) ಮೂರು ಪಕ್ಷಗಳ ನಡುವಿನ ಹಗ್ಗಜಗ್ಗಾಟದ ನಂತರ ಈ ನಿರ್ಧಾರಕ್ಕೆ ಬಂದಿದೆ, ನಾಯಕರು ಈಗ ಉಳಿದ ಸ್ಥಾನಗಳ ಹಂಚಿಕೆಯ ಬಗ್ಗೆ ಚರ್ಚಿಸುತ್ತಿದ್ದಾರೆ. ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಶಿವಸೇನೆ (ಯುಬಿಟಿ) ನಾಯಕ ಅನಿಲ ದೇಸಾಯಿ ಇದುವರೆಗಿನ ಸ್ಥಾನಗಳ ಹಂಚಿಕೆಯನ್ನು ವಿವರಿಸಿದರು.
ಮೂರು ಪಕ್ಷಗಳು ತಲಾ 85 ಸ್ಥಾನಗಳಲ್ಲಿ (ಒಟ್ಟು 255) ಒಮ್ಮತಕ್ಕೆ ಬಂದಿವೆ. ಉಳಿದ 33 ಕ್ಷೇತ್ರಗಳ ಪೈಕಿ 18 ಸ್ಥಾನಗಳ ಬಗ್ಗೆ ಮಿತ್ರಪಕ್ಷಗಳು ಚರ್ಚೆ ನಡೆಸುತ್ತಿದ್ದು, ಉಳಿದ 15 ಕ್ಷೇತ್ರಗಳನ್ನು ಸಣ್ಣ ಪಕ್ಷಗಳಿಗೆ ಹಂಚಿಕೆ ಮಾಡಲಾಗುವುದು ಎಂದರು.
ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ನಡುವಿನ ಕೆಲವು ಸ್ಥಾನಗಳಲ್ಲಿ, ವಿಶೇಷವಾಗಿ ವಿದರ್ಭ ಪ್ರದೇಶ ಮತ್ತು ಮುಂಬೈನಲ್ಲಿ ವಿವಾದದಿಂದಾಗಿ ಸೀಟು ಹಂಚಿಕೆ ಮಾತುಕತೆಗಳು ವಾರಗಳವರೆಗೆ ಎಳೆಯಲ್ಪಟ್ಟವು. ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ವಿದರ್ಭದಲ್ಲಿ ಉತ್ತಮ ಪ್ರದರ್ಶನ ತೋರಿದ ಕಾರಣ ಕಾಂಗ್ರೆಸ್ ತನ್ನ ನೆಲೆಯನ್ನು ಬಿಟ್ಟುಕೊಡಲು ಉತ್ಸುಕವಾಗಿಲ್ಲ.

ಪ್ರಮುಖ ಸುದ್ದಿ :-   ಪಕ್ಷದ ರಾಜ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ತೆಲಂಗಾಣ ಬಿಜೆಪಿಯಲ್ಲಿ ಬಿರುಕು ; ಬಿಜೆಪಿಗೆ ಶಾಸಕ ಟಿ.ರಾಜಾ ಸಿಂಗ್ ರಾಜೀನಾಮೆ

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ವಿವಿಧ ಪಕ್ಷಗಳ ಆಕಾಂಕ್ಷಿಗಳು ಟಿಕೆಟ್‌ಗಾಗಿ ಎಂವಿಎ ಕಚೇರಿಗಳಿಗೆ ಅಲೆಯುತ್ತಿದ್ದಾರೆ – ಅಕ್ಟೋಬರ್ 29 ರಂದು ನಾಮಪತ್ರ ಸಲ್ಲಿಸಲು ಗಡುವು. ಸೀಟು ಹಂಚಿಕೆಯಲ್ಲಿನ ವಿಳಂಬವು ಅವರ ಚುನಾವಣಾ ಭವಿಷ್ಯಕ್ಕೆ ಕುತ್ತು ತರಬಹುದು.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 48 ಲೋಕಸಭಾ ಸ್ಥಾನಗಳಲ್ಲಿ 31 ಸ್ಥಾನಗಳನ್ನು ಎಂವಿಎ (MVA) ಗೆದ್ದುಕೊಂಡಿದೆ. ಸಣ್ಣ ಪಕ್ಷಗಳು ಇಂಡಿಯಾ ಬ್ಲಾಕ್ ಬ್ಯಾನರ್ ಅಡಿಯಲ್ಲಿ ಸ್ಪರ್ಧಿಸಲು ಉತ್ಸುಕವಾಗಿವೆ, ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಕೇವಲ 17 ಸ್ಥಾನಗಳಲ್ಲಿ ಗೆದ್ದಿತು.
2019 ರ ವಿಧಾನಸಭೆ ಚುನಾವಣೆಯಲ್ಲಿ, ಬಿಜೆಪಿ 105 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಅದರ ಮಿತ್ರ ಪಕ್ಷವಾದ ಅವಿಭಜಿತ ಶಿವಸೇನೆ 56 ಸ್ಥಾನಗಳನ್ನು ಗಳಿಸಿತ್ತು. ಯುಪಿಎಯ ಭಾಗವಾಗಿದ್ದ ಎನ್‌ಸಿಪಿ (ಅವಿಭಜಿತ) 54 ಮತ್ತು ಕಾಂಗ್ರೆಸ್ 44 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement