ತುಮಕೂರು: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕೆರೆಕೋಡಿ ನೀರಿನಲ್ಲಿ ಕೊಚ್ಚಿಹೋಗಿದ್ದ ಯುವತಿಯೊಬ್ಬಲಳು ಸಾವನ್ನು ಗೆದ್ದು ಬಂದಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಜಿಲ್ಲೆ ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದ ಹಂಸಾ (19) ಎಂಬ ವಿದ್ಯಾರ್ಥಿನಿ ಮೈದಾಳ ಕೆರೆಯ ಕೋಡಿ ನೀರಿನಲ್ಲಿ ಭಾನುವಾರ ಕೊಚ್ಚಿ ಹೋಗಿದ್ದಳು. 12 ಗಂಟೆಗಳ ಕಾರ್ಯಾಚರಣೆ ನಡೆಸಿದ ಅಗ್ನಿ ಶಾಮಕ ದಳದವರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಹಂಸಾಳನ್ನು ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಗುಬ್ಬಿ ತಾಲೂಕು ಶಿವರಾಂಪುರದ ನಿವಾಸಿ ಸೋಮನಾಥ್ ಅವರ ಪುತ್ರಿ ಹಂಸ ಅವರು ನಗರದ ಎಸ್‌ಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾರೆ.
ಭಾನುವಾರ ಅವರು ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದಿದ್ದರು.ರಾತ್ರಿ ಎಂಟು ಗಂಟೆಯವರೆ ರಕ್ಷಣಾ ಕಾರ್ಯಾಚರಣೆ ನಡೆಸಿದ್ದ ಸಿಬ್ಬಂದಿ ಸೋಮವಾರ ಬೆಳಿಗ್ಗೆ ಮತ್ತೆ ಹುಡುಕಾಟ ಮುಂದುವರಿಸಿದ್ದರು. ಕೋಡಿ ನೀರು ರಭಸವಾಗಿ ಹರಿಯುತ್ತಿದ್ದ ಶೋಧ ಕಾರ್ಯಾಚರಣೆಗೆ ತೊಡಕಾಗಿತ್ತು. ಹೀಗಾಗಿ ಕೆರೆ ಕೊಡಿಯ ನೀರನ್ನು ಬೇರೆಡೆಗೆ ತಿರುಗಿಸಿ ಕಲ್ಲಿನ ಪೊಟರೆಯ ಜಾಗಕ್ಕೆ ನೀರು ಹೋಗದಂತೆ ನೋಡಿಕೊಂಡು, ಬಳಿಕ ರಕ್ಷಣಾ ಕಾರ್ಯ ನಡೆಸಿದರು. ಕಲ್ಲುಬಂಡೆಯೊಳಗೆ ವಿದ್ಯಾರ್ಥಿನಿ ಹಂಸಾ ಸಿಲುಕಿಕೊಂಡಿದ್ದಳು. ಅದೃಷ್ಟವಶಾತ್ ಆ ಭಾಗದಲ್ಲಿ ನೀರಿನ ಹರಿವು ಹಾಗೂ ಮಟ್ಟ ಕಡಿಮೆಯಿತ್ತು. ಹೀಗಾಗಿ ಹಂಸಾಳಿಗೆ ತೊಂದರೆಯಾಗಿಲ್ಲ. ಯಶಸ್ವಿಯಾಗಿ ರಕ್ಷಣಾ ಕಾರ್ಯ ನಡೆಸಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ