ದರ್ಶನಗೆ ವೈದ್ಯಕೀಯ ಜಾಮೀನು : ಬುಧವಾರ ಆದೇಶ ಪ್ರಕಟಿಸಲಿರುವ ಹೈಕೋರ್ಟ್‌

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್‌ ಅವರು ಬೆನ್ನುಹುರಿ ಸಮಸ್ಯೆಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ವೈದ್ಯಕೀಯ ಜಾಮೀನು ಕೋರಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಬುಧವಾರಕ್ಕೆ (ಅಕ್ಟೋಬರ್‌ 30) ಕರ್ನಾಟಕ ಹೈಕೋರ್ಟ್‌ ಕಾಯ್ದಿರಿಸಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ನಟ ದರ್ಶನ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ನಡೆಸಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಬುಧವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿತು.
ಇದಕ್ಕೂ ಮುನ್ನ, ದರ್ಶನ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ ಅವರು “ದರ್ಶನ್‌ ಅವರು ಬೆನ್ನುಹುರಿ/ನರದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಈಗ ಅವರಿಗೆ ಪಾದದಲ್ಲಿ ಜೋಮು ಕಾಣಿಸುತ್ತಿದೆ, ಇದು ಮುಂದುವರಿದರೆ ಮೂತ್ರ ಸಮಸ್ಯೆ ಉಂಟಾಗಲಿದೆ. ದೀರ್ಘಾವಧಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಲಿದ್ದಾರೆ ಎಂದು ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯ ನರರೋಗ ತಜ್ಞರಾದ ಡಾ.ವಿಶ್ವನಾಥ ವರದಿ ನೀಡಿದ್ದಾರೆ ಎಂದರು.

ದರ್ಶನ್‌ ಈಗಾಗಲೇ ಎರಡು ಬಾರಿ ಮೈಸೂರಿನ ಖಾಸಗಿ ಆಸ್ಪತ್ರೆಯಾದ ಅಪೊಲೊದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ತಮ್ಮದೇ ಖರ್ಚಿನಲ್ಲಿ ಈಗಲೂ ಅಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಸುಪ್ರೀಂ ಕೋರ್ಟ್‌ ಹಾಗೂ ಕರ್ನಾಟಕ ಹೈಕೋರ್ಟ್‌ ಸಾಕಷ್ಟು ಪ್ರಕರಣಗಳಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಿವೆ. ನ್ಯಾಯಾಲಯವು ಷರತ್ತು ವಿಧಿಸಿ, ಮೂರು ತಿಂಗಳು ಮಧ್ಯಂತರ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಮೊದಲ ವೃತ್ತಿಪರ ಮಹಿಳಾ ಭಾಗವತ ಲೀಲಾವತಿ ಬೈಪಾಡಿತ್ತಾಯ ನಿಧನ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್‌ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ ಅವರು “ನ್ಯಾಯಾಲಯವು ತಜ್ಞ ವೈದ್ಯರನ್ನು ಒಳಗೊಂಡ ವೈದ್ಯಕೀಯ ಮಂಡಳಿ ರಚಿಸಿ, ಅವರು ನೀಡುವ ವರದಿಯನ್ನು ಆಧರಿಸಿ ದರ್ಶನಗೆ ವೈದ್ಯಕೀಯ ಜಾಮೀನು ಮಂಜೂರು ಮಾಡಬೇಕು. ಸುಪ್ರೀಂ ಕೋರ್ಟ್‌ ಸಹ ಹಲವು ಪ್ರಕರಣಗಳಲ್ಲಿ ವೈದ್ಯಕೀಯ ಮಂಡಳಿಯ ಶಿಫಾರಸ್ಸು ಆಧರಿಸಿ, ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ. ದರ್ಶನ್‌ ಬೆಂಗಳೂರಿಗೆ ಬಂದು ಇಲ್ಲಿ ವೈದ್ಯಕೀಯ ಮಂಡಳಿಯ ತಜ್ಞರ ತಪಾಸಣೆಗೆ ಒಳಗಾಗಲಿ. ಅವರು ವರದಿ ನೀಡಲಿ. ಇದನ್ನು ಆಧರಿಸಿ ನ್ಯಾಯಾಲಯವು ನಿರ್ಧರಿಸಬೇಕು” ಎಂದು ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಬುಧವಾರ ಆದೇಶ ಪ್ರಕಟಿಸಲಾಗುವುದು ಎಂದು ಹೇಳಿತು.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement