ಬೆಂಗಳೂರು : ಬೆಳಗಾವಿಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಡೆಸಲು ಉದ್ದೇಶಿಸಿರುವ ಕಾನೂನುಬಾಹಿರ ಕರಾಳ ದಿನ ಪ್ರತಿಭಟನೆಗೆ ಮಧ್ಯಂತರ ಪ್ರತಿಬಂಧಕಾದೇಶ ನೀಡುವಂತೆ ಕೋರಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಎಂಇಎಸ್‌ಗೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಮಲ್ಲಪ್ಪ ಚಾಯಪ್ಪ ಅಕ್ಷರದ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ ಮತ್ತು ಕೆ ರಾಜೇಶ ರೈ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎನ್.ಪಿ. ಅಮೃತೇಶ ಅವರು “2019ರಿಂದ ಎಂಇಎಸ್ ಉಗ್ರ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ. ಸರ್ಕಾರ ಅನುಮತಿಸದಿದ್ದರೂ ಪ್ರತಿಭಟನೆ ನಡೆಸುವ ಉದ್ಧಟತನವನ್ನು ಎಂಇಎಸ್ ಪ್ರದರ್ಶಿಸುತ್ತಾ ಬಂದಿದೆ. ಇಂಥವರ ವಿರುದ್ಧ ಪೊಲೀಸರು ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸಿ ಕೈತೊಳೆದುಕೊಳ್ಳುತ್ತಿದ್ದಾರೆ” ಎಂದು ಆಕ್ಷೇಪಿಸಿದರು.
ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ವಕೀಲೆ ನಿಲೋಫರ್ ಅಕ್ಬರ್ ಅವರು “ಹೈಕೋರ್ಟ್‌ನ ಸಮನ್ವಯ ಪೀಠವು ಕನ್ನಡ ರಾಜ್ಯೋತ್ಸವನ್ನು ನಿರಾತಂಕವಾಗಿ ನಡೆಸಲು ಸರ್ಕಾರ ಮತ್ತು ಪೊಲೀಸರು ಕ್ರಮಕೈಗೊಳ್ಳಬೇಕು. ಕಾನೂನುಬಾಹಿರವಾಗಿ ನಡೆದುಕೊಳ್ಳುವವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಆದೇಶಿಸಿದೆ. ಈ ಆದೇಶದ ಅನ್ವಯ ಮುಚ್ಚಳಿಕೆ ನೀಡಲು ಸಿದ್ಧವಿದ್ದೇವೆ. ಹೀಗಾಗಿ, ಪಿಐಎಲ್ ಸಲ್ಲಿಸುವ ಸನ್ನಿವೇಶವೇ ಉದ್ಭವಿಸಿಲ್ಲ. ಪ್ರಚಾರಕ್ಕಾಗಿ ಪಿಐಎಲ್ ಸಲ್ಲಿಕೆ ಮಾಡಲಾಗಿದ್ದು, ಅದನ್ನು ವಜಾ ಮಾಡಬೇಕು” ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪಿಸಿದ ಅಮೃತೇಶ, “ಸರ್ಕಾರದ ಎಚ್ಚರಿಕೆಗೆ ಎಂಇಎಸ್ ಕಾರ್ಯಕರ್ತರು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಕಳೆದ ಮೂರು ನಾಲ್ಕು ವರ್ಷಗಳಿಂದ ದುರ್ವರ್ತನೆ ತೋರುತ್ತಿದ್ದಾರೆ. ಮಾರಕಾಸ್ತ್ರಗಳನ್ನು ಪ್ರತಿಭಟನೆಗೆ ಕೊಂಡೊಯ್ಯಲಾಗುತ್ತಿದೆ. ಎಂಇಎಸ್ ಅಧ್ಯಕ್ಷ ಮನೋಜ್ ಕಿಣೇಕರ್ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವದ ಬಳಿಕ ಮಾಧ್ಯಮಗಳ ವರದಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಅರ್ಜಿಯನ್ನು ಬಾಕಿ ಉಳಿಸಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಬೇಕು” ಎಂದು ಕೋರಿದರು.
ಇದನ್ನು ಪುರಸ್ಕರಿಸಿದ ಪೀಠವು ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಹಾಗೂ ಎಂಇಎಸ್‌ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿತು.
ನಿಮ್ಮ ಕಾಮೆಂಟ್ ಬರೆಯಿರಿ