ವಕ್ಫ್ ಆಸ್ತಿ ರಾಷ್ಟ್ರೀಕರಣ ಮಾಡಿ ; ಪ್ರಧಾನಿ ಮೋದಿಗೆ ಪತ್ರ ಬರೆದ ಯತ್ನಾಳ

ಬೆಂಗಳೂರು: ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಲು ಒತ್ತಾಯಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ವಕ್ಫ್ ಮಂಡಳಿಯು ದೇಶದಾದ್ಯಂತ ರೈತರು, ಭೂಮಾಲೀಕರು, ದೇವಸ್ಥಾನಗಳು, ಟ್ರಸ್ಟ್‌ಗಳು ಮತ್ತು ಮಠಗಳ ಜಮೀನುಗಳ ಮೇಲೆ ಹಕ್ಕು ಸಾಧಿಸುವ ಅನಿಯಂತ್ರಿತ, ಸ್ಪಷ್ಟ ಉಲ್ಲಂಘನೆಯನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಜಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.

ದೇಶದ ಎಲ್ಲಾ ಪ್ರಜೆಗಳಿಗೂ ಭೂಮಿಯ ಮೇಲೆ ಸಮಾನ ಹಕ್ಕಿದೆ. ವಕ್ಫ್‌ನ ಉದ್ದೇಶವು ಕಲ್ಯಾಣ ಮತ್ತು ಸಮಾಜ ಸೇವೆಯಾಗಿದ್ದರೆ, ಭಾರತವು ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಪಕ್ಷಪಾತ ಮತ್ತು ಧಾರ್ಮಿಕ ತಾರತಮ್ಯವಿಲ್ಲದೆ ಇದನ್ನು ಮಾಡಬೇಕಾಗಿದೆ. ದೇಶದ ಸಂಪನ್ಮೂಲ ಯಾವುದೇ ಸೀಮಿತ ಕೋಮಿಗೆ ಸೇರುವುದು ಜಾತ್ಯತೀತ ತತ್ವದ ವಿರುದ್ಧವಾಗಿರುತ್ತದೆ. ಆದ್ದರಿಂದ, ಅದನ್ನು ಸದ್ಬಳಕೆ ಮಾಡುವ ಸದುದ್ದೇಶದಿಂದ ಪ್ರಧಾನಿ ಅವರಿಗೆ ಮನವಿ ಸಲ್ಲಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ವಕ್ಫ್ ಕಾನೂನಿನಂತೆ ಹಿಂದೂ, ಜೈನ್, ಸಿಖ್ ಮುಂತಾದ ಸಮುದಾಯಗಳಲ್ಲಿ ಕಾನೂನು ಇಲ್ಲ. ವಕ್ಫ್ ಕಾನೂನು ಜಾತ್ಯತೀತತೆ, ಏಕತೆ, ಸಮಗ್ರತೆಗೆ ವಿರುದ್ಧವಾಗಿದೆ. ಯಾವುದೇ ಆಸ್ತಿಯನ್ನು ದಾನ ಮಾಡಿದರೆ ಅದು ವಕ್ಫ್ ಆಸ್ತಿಯಾಗುತ್ತದೆ. ಸಂವಿಧಾನದಲ್ಲಿ ವಕ್ಫ್ ಎಂಬ ಪದವನ್ನು ಎಲ್ಲೂ ಬಳಸಿಲ್ಲ. ವಕ್ಫ್ ಕಾನೂನು ದೇಶದ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಸಿಂಧಗಿಯ ವಿರಕ್ತ ಮಠಕ್ಕೆ 12-13ನೇ ಶತಮಾನದಲ್ಲಿ ರಾಣಿ ಅಬ್ಬಕ್ಕ ಆಸ್ತಿ ದಾನ ಮಾಡಿದ್ದರು. ವಕ್ಫ್ ಅಸ್ತಿತ್ವಕ್ಕೆ ಬಂದಿದ್ದು, 19ನೇ ಶತಮಾನದಲ್ಲಿ. ಆದರೆ, ವಕ್ಫ್ ಮಂಡಳಿ ಈಗ ಆ ಆಸ್ತಿ ತನ್ನದೆಂದು ಹೇಳುತ್ತಿದೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ತರಗತಿಯಲ್ಲಿ ಪಾಠ ಕೇಳುತ್ತಿದ್ದಾಗಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು ; ಶಾಕಿಂಗ್‌ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಿದರೆ ಪಾರದರ್ಶಕತೆ ಜೊತೆಗೆ ಅರ್ಹ ಭೂ ಮಾಲೀಕರ ಹಕ್ಕನ್ನೂ ಕಾಪಾಡುತ್ತದೆ. ವಕ್ಫ್ ಆಸ್ತಿಗಳನ್ನು ಸಾರ್ವಜನಿಕ ಬಳಕೆಗೆ ಬಳಸಲು ಅನುಕೂಲವಾಗಲಿದೆ. ಯಾವುದೇ ಜಾತಿ, ಧರ್ಮಾತೀತವಾಗಿ ವಕ್ಫ್ ಆಸ್ತಿಗಳನ್ನು ಶಾಲೆ, ಕಾಲೇಜು, ಆಸ್ಪತ್ರೆ, ಸಂಶೋಧನಾ ಕೇಂದ್ರ ಮುಂತಾದವುಗಳನ್ನು ನಿರ್ಮಿಸಲು ಸಹಕಾರಿಯಾಗಲಿದೆ. ಹೀಗಾಗಿ ದೇಶದ ನಾಗರಿಕ ಹಕ್ಕನ್ನು ರಕ್ಷಿಸಲು ತಾವೂ ಕೂಡಲೇ ವಕ್ಫ್ ಆಸ್ತಿಗಳ ನಿರ್ವಹಣೆಗೆ ನೀತಿ ರೂಪಿಸುವಂತೆ ಕೋಡುತ್ತೇನೆ ಎಂದು ಮನವಿ ಮಾಡಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement