ಬೆಂಗಳೂರು: “ಈ ದೇವಸ್ಥಾನದ (Hindu Temple) ಹಣವನ್ನು ಈ ದೇವಸ್ಥಾನದ ಅಭಿವೃದ್ಧಿಗೇ ಬಳಸುತ್ತೇವೆ. ಅನ್ಯ ಉದ್ದೇಶಕ್ಕೆ ಬಳಸುವುದಿಲ್ಲ” ಎಂದು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಎದ್ದು ಕಾಣುವಂತೆ ದೇವಸ್ಥಾನದಲ್ಲಿ ಬೋರ್ಡ್ ಹಾಕಲು ಮುಜರಾಯಿ ಇಲಾಖೆ (Muzrai Department) ಮುಂದಾಗಿದೆ.
ಮುಜರಾಯಿ ದೇವಸ್ಥಾನದಲ್ಲಿ ಭಕ್ತರು ಸಲ್ಲಿಸುವ ಕಾಣಿಕೆಯ ಹಣವನ್ನು ಅನ್ಯ ಧರ್ಮದ ಪವಿತ್ರ ಸ್ಥಳಗಳಿಗೆ ಬಳಕೆ ಮಡಲಾಗುತ್ತಿದೆ ಎಂಬ ಭಕ್ತರ ಅಸಮಾದಾನ ಶಮನಕ್ಕೆ ಮುಂದಾಗಿರುವ ಸರ್ಕಾರ, ರಾಜ್ಯದಲ್ಲಿರುವ ಎಲ್ಲ ಮುಜರಾಯಿ ದೇವಸ್ಥಾನದ ಮುಂದೆ ಈ ಬೋರ್ಡ್ ಹಾಕಲು ಉದ್ದೇಶಿಸಿದೆ. ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವ್ಯಾಪ್ತಿಯಲ್ಲಿ 34564 ಅಧಿಸೂಚಿತ ಸಂಸ್ಥೆಗಳಿವೆ.
ಇದರಲ್ಲಿ ಪ್ರವರ್ಗ ಎ ಅಡಿಯಲ್ಲಿ 205, ಪ್ರವರ್ಗ ಬಿ ಅಡಿಯಲ್ಲಿ 193 ಹಾಗೂ ಪ್ರವರ್ಗ ಸಿ ಅಡಿಯಲ್ಲಿ 34166 ದೇವಸ್ಥಾನಗಳಿವೆ. ಈ ದೇವಸ್ಥಾನಗಳ ಮುಂದೆ ಡಿಸೆಂಬರ್ ಬಳಿಕ “ಈ ದೇವಸ್ಥಾನದ (Hindu Temple) ಹಣವನ್ನು ಈ ದೇವಸ್ಥಾನದ ಅಭಿವೃದ್ಧಿಗೇ ಬಳಸುತ್ತೇವೆ. ಅನ್ಯ ಉದ್ದೇಶಕ್ಕೆ ಬಳಸುವುದಿಲ್ಲ” ಎಂಬ ನಾಮಫಲಕ ಹಾಕಲಾಗುತ್ತದೆ.
ಮುಜರಾಯಿ ದೇವಸ್ಥಾನದ ಹಣವನ್ನು ಅನ್ಯ ಧರ್ಮದ ಧಾರ್ಮಿಕ ಸಂಸ್ಥೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ವಿಧಾನ ಮಂಡಲ ಅಧಿವೇಶನದಲ್ಲೂ ಚರ್ಚೆಯಾಗಿತ್ತು. ಈಗ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಧಾರ್ಮಿಕ ದತ್ತಿ ಪರಿಷತ್ ಸಭೆಯಲ್ಲಿ ಈ ಕುರಿತು ನಿರ್ಣಯಕ್ಕೆ ಬರಲಾಗಿದೆ. ನಡಾವಳಿಯೂ ಸಿದ್ಧವಾಗಿದೆ.
ಮುಂಬರುವ ದಿನಗಳಲ್ಲಿ ಪ್ರತಿ ದೇವಸ್ಥಾನದ ವಾರ್ಷಿಕ ಲೆಕ್ಕಚಾರವನ್ನು ಜನರ ಮುಂದಿಡುವ ಆಲೋಚನೆಯೂ ಇದೆ. ಇದಕ್ಕೊಂದು ವ್ಯವಸ್ಥೆ ರೂಪಿಸಿದ ಬಳಿಕ ಈ ಕ್ರಮ ಜಾರಿಗೆ ತರಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ, ‘ಸಾಮಾಜಿಕ ಜಾಲತಾಣದಲ್ಲಿ ದೇವಸ್ಥಾನದ ಹಣವನ್ನು ಬೇರೆಡೆ ಬಳಸಲಾಗುತ್ತಿದೆ ಎಂಬ ಸುಳ್ಳು ಹರಡಲಾಗುತ್ತಿದೆ. ಜನರು ಅದನ್ನೇ ನಂಬುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಇದನ್ನು ದೂರ ಮಾಡುವ ನಿಟ್ಟಿನಲ್ಲಿ ದೇವಸ್ಥಾನದ ಫಲಕದಲ್ಲಿ ದೇವಸ್ಥಾನದ ಆದಾಯ ಅದೇ ದೇವಸ್ಥಾನಕ್ಕೆ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಲಿದ್ದೇವೆ’ ಎಂದು ತಿಳಿಸಿದರು. ಅಲ್ಲದೆ, ಫಲಕದಲ್ಲಿ ‘ಎ’, ‘ಬಿ’ ದೇವಸ್ಥಾನಗಳಲ್ಲಿ ಅರ್ಚಕರು, ಭಕ್ತರಿಗಿರುವ ಸೌಕರ್ಯದ ಮಾಹಿತಿ ನೀಡಲು ನಿರ್ಧರಿಸಲಾಗಿದೆ ಎಂದರು.
ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಡಿಯ ದೇವಸ್ಥಾನಗಳಲ್ಲಿ ಸುಮಾರು 35 ಸಾವಿರ ಸಿಬ್ಬಂದಿ ಇದ್ದಾರೆ. ಅರ್ಚಕರು, ಸಿಬ್ಬಂದಿ ಮಕ್ಕಳಿಗೆ ಪದವಿವೂರ್ವ ಶಿಕ್ಷಣಕ್ಕೆ ವಾರ್ಷಿಕ ₹5 ಸಾವಿರದಿಂದ ಹಿಡಿದು ವಿದೇಶಿ ವ್ಯಾಸಂಗದವರೆಗೆ ₹ 1ಲಕ್ಷವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಅರ್ಚಕರು, ನೌಕರರು ಮೃತಪಟ್ಟಲ್ಲಿ ₹ 2 ಲಕ್ಷ ಪರಿಹಾರ ನೀಡಲಾಗುವುದು. ಇದರ ಮಾಹಿತಿ ಸಿಬ್ಬಂದಿಗೆ ತಲುಪಿಸಲು ಫಲಕ ಅಳವಡಿಸಲಾಗುತ್ತದೆ. ಹಾಗೂ ಮೊಬೈಲ್ ಬಳಕೆ ನಿಷೇಧ, ಸ್ವಚ್ಛತೆ ಕಾಪಾಡುವುದು ಸೇರಿ ಭಕ್ತರಿಗೆ ಅನುಕೂಲವಾಗುವ ಮಾಹಿತಿಯೂ ಇರಲಿದೆ ಎಂದು ತಿಳಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ