ಹಾವೇರಿ | ಲೋಕಾಯುಕ್ತ ದಾಳಿ ವೇಳೆ ಲಕ್ಷಗಟ್ಟಲೆ ನಗದು ಹಣ ಗಂಟುಕಟ್ಟಿ ಕಿಟಿಕಿಯಿಂದ ಹೊರಗೆ ಎಸೆದ ಅಧಿಕಾರಿ…!

ಹಾವೇರಿ: ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ಹೆದರಿದ ಅಧಿಕಾರಿಯೊಬ್ಬರು ನೋಟುಗಳ ಕಟ್ಟುಗಳನ್ನು ಗಂಟುಕಟ್ಟಿ ಹೊರಗೆಸೆದಿರುವ ವಿದ್ಯಮಾನ ಹಾವೇರಿಯಲ್ಲಿ ನಡೆದಿರುವುದು ವರದಿಯಾಗಿದೆ.
ಹಾವೇರಿ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಹಿರೇಕೆರೂರು ಉಪವಿಭಾಗದ ಸಹಾಯಕ ಇಂಜಿನಿಯರ್ ಕಾಶಿನಾಥ ಭಜಂತ್ರಿ ಎಂಬವರು ಲೋಕಾಯುಕ್ತ ಅಧಿಕಾರಿಗಳ ದಾಳಿಯ ವೇಳೆ 9 ಲಕ್ಷ ರೂ. ನಗದು ಹಣವನ್ನು ಗಂಟು ಕಟ್ಟಿ ಹೊರಗೆಸೆದಿದ್ದಾರೆ ಎನ್ನಲಾಗಿದೆ.
ಮಂಗಳವಾರ (ನವೆಂಬರ್‌ ೧೨) ಬೆಳಿಗ್ಗೆ ಲೋಕಾಯುಕ್ತ ಎಸ್ ಪಿ ಎಂ.ಎಸ್ ಕೌಲಾಪುರೆ ನೇತೃತ್ವದ ತಂಡ ಬಸವೇಶನಗರದ 1ನೇ ಕ್ರಾಸ್‌ನಲ್ಲಿರುವ ಭಜಂತ್ರಿ ನಿವಾಸದ ಮೇಲೆ ದಾಳಿ ನಡೆಸಿತ್ತು

. ಲೋಕಾಯುಕ್ತ ಅಧಿಕಾರಿಗಳು ಮನೆಗೆ ಬಂದು ಬಾಗಿಲು ಬಡಿದಾಗ ಕಾಶೀನಾಥ ಭಜಂತ್ರಿ ಕೂಡಲೇ ಕೋಣೆಗೆ ತೆರಳಿ 9 ಲಕ್ಷ ರೂ. ನಗದು ಹಣ ಗಂಟು ಕಟ್ಟಿ ಶೌಚಾಲಯದ ಕಿಟಕಿ ಮೂಲಕ ಹೊರಗೆ ಎಸೆದಿದ್ದಾರೆ. ಇದನ್ನು ಗಮನಿಸಿದ ಲೋಕಾಯುಕ್ತ ಅಧಿಕಾರಿಗಳು ಆ ಹಣವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಭಜಂತ್ರಿ 2 ಲಕ್ಷ ರೂಪಾಯಿ ನಗದನ್ನು ಹಾಸಿಗೆಯಲ್ಲಿ ಸುತ್ತಿ ಇಟ್ಟಿದ್ದರು. ಮನೆಯಲ್ಲಿದ್ದ 14 ಲಕ್ಷ ರೂಪಾಯಿ ನಗದು ಹಣವನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ಕೌಲಾಪುರೆ ತಿಳಿಸಿದ್ದಾರೆ. ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳು ಹಾಗೂ ದಾಖಲೆಗಳು ಸಿಕ್ಕಿದ್ದು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಹಿಂದೂ ಸಂಘಟನೆ ಮುಖಂಡ ಪುನೀತ ಕೆರೆಹಳ್ಳಿಗೆ ಜೀವ ಬೆದರಿಕೆ ಕರೆ

5 / 5. 6

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement