ಮುಂಬೈ : ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಟೋಯಿ ಹೆಸರಲ್ಲಿ ನಟ ಸಲ್ಮಾನ್ ಖಾನ್ ಜೀವ ಬೆದರಿಕೆ ಹಾಕಿ 5 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯ ಮಾನ್ವಿಯ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಬಿಷ್ಟೋಯಿ ಹೆಸರಲ್ಲಿ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿ ಬಂಧನಕ್ಕೆ ಒಳಗಾದ ಈ ವ್ಯಕ್ತಿಯನ್ನು ಸುಹೇಲ್ ಪಾಷಾ (24) ಎಂದು ಗುರುತಿಸಲಾಗಿದೆ. ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿದ್ದ ಮತ್ತೊಂದು ಪ್ರಕರಣದಲ್ಲಿ ರಾಜಸ್ತಾನ ಮೂಲದ ಭಿಕಾರಾಂ ಜಲಾರಾಂ ಎಂಬಾತನನ್ನು ಕಳೆದ ಮಂಗಳವಾರ ಹಾವೇರಿಯಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು.
ಯುವ ಗೀತ ರಚನೆಕಾರ ಎಂದು ಹೇಳಲಾಗಿರುವ ಸುಹೇಲ್, ತನ್ನ ಹೊಸ ಹಾಡನ್ನು ಜನಪ್ರಿಯ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ರೀತಿಯ ಬೆದರಿಕೆ ಹಾಕಿದ್ದ ಎಂಬ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಬೆದರಿಕೆ ಹಾಕಲು ಈತ ಮತ್ತೊಬ್ಬ ವ್ಯಕ್ತಿಯ ಮೊಬೈಲ್ ಬಳಸಿದ್ದಾನೆ ಎಂದು ಹೇಳಲಾಗಿದೆ.
ನವೆಂಬರ್ 7ರಂದು ಮುಂಬೈ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಸಂದೇಶ ಕಳುಹಿಸಿದ್ದ ಈತ, ‘5 ಕೋಟಿ ಕೊಡದಿದ್ದರೆ ಸಲ್ಮಾನ್ ಖಾನ್ ಅವರನ್ನು ಕೊಲ್ಲಲಾಗುವುದು. ಜೊತೆಗೆ, ‘ಮೈ ಸಿಕಂದರ್ ಹೂಂ ಎಂಬ’ ಹಾಡು ಬರೆದವರನ್ನೂ ಹತ್ಯೆ ಮಾಡಲಾಗುವುದು’ ಎಂದು ಬೆದರಿಕೆ ಹಾಕಿದ್ದ.
ಸಂದೇಶ ಬಂದ ವಾಟ್ಸಾಪ್ ಸಂಖ್ಯೆ ಬೆನ್ನಟ್ಟಿದ ಮುಂಬೈ ಪೊಲೀಸರಿಗೆ ಅದು ವೆಂಕಟ ನಾರಾಯಣ ಎಂಬವರ ಸಂಖ್ಯೆಯಿಂದ ರವಾನೆಯಾಗಿದ್ದು ಕಂಡುಬಂದಿತ್ತು. ಆದರೆ ತನಿಖೆ ವೇಳೆ ವೆಂಕಟ ನಾರಾಯಣ ಅವರ ಮೊಬೈಲ್‌ನಲ್ಲಿ ಇಂಟರ್ನೆಟ್ ಸಂಪರ್ಕ ಇರಲಿಲ್ಲ ಎಂಬುದು ಪತ್ತೆಯಾಗಿತ್ತು.
ತನಿಖೆ ಮುಂದುವರಿಸಿದ ಪೊಲೀಸರು ಅಪರಿಚಿತನೊಬ್ಬ ಕರೆ ಮಾಡುವ ಉದ್ದೇಶದಿಂದ ತನ್ನ ಮೊಬೈಲ್ ಪಡೆದಿದ್ದ ಎಂದು ವೆಂಕಟ ನಾರಾಯಣ ನೀಡಿದ ಮಾಹಿತಿಯ ಜಾಡನ್ನು ಹಿಡುದು ಹೊರಟರು. ಮೊಬೈಲ್ ಪರಿಶೀಲನೆ ವೇಳೆ ಮೊಬೈಲ್‌ಗೆ ವಾಟ್ಸಾಪ್ ಇನ್‌ಸ್ಟಾಲ್ ಮಾಡಲು ಒಟಿಪಿ ಬಂದಿದ್ದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿ ಸುಹೇಲ್ ಕೃತ್ಯ ಎಂಬುದು ಗೊತ್ತಾಯಿತು. ವೆಂಕಟ ನಾರಾಯಣ ಅವರ ಮೊಬೈಲ್ ಸಂಖ್ಯೆ ಬಳಸಿ ತನ್ನ ಮೊಬೈಲ್‌ನಲ್ಲಿ ವಾಟ್ಸಾಪ್ ಇನ್‌ಸ್ಟಾಲ್ ಮಾಡಿದ್ದ ಎಂಬುದು ಖಚಿತಪಟ್ಟಿತ್ತು. ಈ ಸುಳಿವು ಆಧರಿಸಿ ಮಾನ್ವಿಗೆ ತೆರಳಿ ಸುಹೇಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ತನ್ನ ಹೊಸ ಹಾಡು ‘ಮೈ ಸಿಕಂದರ್ ಹೂಂ’ ಜನಪ್ರಿಯಗೊಳಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ