ಗುವಾಹತಿ : ಹುಲಿಯನ್ನು ಕಂಡು ಭಯಭೀತರಾದ ಜನರು ಅದರ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದ ಪರಿಣಾಮ ಹುಲಿಯೊಂದು ತೀವ್ರವಾಗಿ ಗಾಯಗೊಂಡಿದೆ. ಅಲ್ಲದೆ, ಚೂಪಾದ ಕಲ್ಲುಗಳು ತಗುಲಿ ಹುಲಿಯ ಮೆದುಳಿಗೆ ಗಾಯವಾಗಿ ಕಣ್ಣಿನ ದೃಷ್ಟಿಯನ್ನೂ ಕಳೆದುಕೊಂಡಿದೆ. ಈ ಘಟನೆ ಅಸ್ಸಾಂನ ಕಲಿಯಾಬೋರ್ ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಅಸ್ಸಾಂ ನ ಅರಣ್ಯ ಪ್ರದೇಶದ ಪೊದೆಗಳಲ್ಲಿ ಬಹಿರಂಗವಾಗಿ ತಿರುಗಾಡುತ್ತಿದ್ದ ಹುಲಿಯನ್ನು ಹೆದರಿಸ ಅಲ್ಲಿನ ಸ್ಥಳೀಯರು ಅದರ ಮೇಲೆ ಕಲ್ಲು ಹಾಗೂ ಇಟ್ಟಿಗೆಗಳಿಂದ ದಾಳಿ ನಡೆಸಿದ್ದಾರೆ.
ಜನರ ಗುಂಪಿನಿಂದ ತಪ್ಪಿಸಿಕೊಳ್ಳಲು ಹೆಣ್ಣು ಹುಲಿ ಓಡಿದೆ. ಆದರೆ ನಿರಂತರವಾಗಿ ಚೂಪಾದ ವಸ್ತುಗಳನ್ನು ಎಸೆದ ಪರಿಣಾಮ ಹುಲಿಯು ತೀವ್ರವಾಗಿ ಗಾಯಗೊಂಡಿದೆ. ಮೆದುಳಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಮೂಗಿನಲ್ಲಿ ರಕ್ತಸ್ರಾವವಾಗಿದೆ. ಕಣ್ಣಿಗೂ ಕಲ್ಲು ತಗುಲಿ ದೃಷ್ಟಿ ಹೋಗಿದೆ. ಈಗ ಅದರ ಸ್ಥಿತಿ ತೀರಾ ಗಂಭೀರವಾಗಿದೆ ಎಂಬ ಮಾಹಿತಿ ದೊರೆತಿದೆ.
ಅರಣ್ಯ ಇಲಾಖೆ ತಂಡ ಬಹಳ ಕಷ್ಟಪಟ್ಟು ಹುಲ್ಲಿಯನ್ನು ರಕ್ಷಿಸಿ ಪ್ರಾಣ ಉಳಿಸಿದೆ. ಹುಲಿ ಮೇಲೆ ಜನರು ದಾಳಿ ನಡೆಸುತ್ತಿರುವ ವೀಡಿಯೊ ಈಗ ಎಲ್ಲೆಡೆ ಹರಿದಾಡುತ್ತಿದೆ.
ಸ್ಥಳೀಯರು ಭಯಗೊಂಡು ಹುಲಿಯ ಮೇಲೆ ದಾಳಿ ಮಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೊದಲ ಕ್ಲಿಪ್ ನಲ್ಲಿ ಜನರ ಗುಂಪೊಂದು ಹುಲಿಯ ಮೇಲೆ ದಾಳಿ ಮಾಡುವುದನ್ನು ತೋರಿಸುತ್ತದೆ. ಗದ್ದೆಯಲ್ಲಿ ಹೆಣ್ಣು ಹುಲಿಯನ್ನು ಕಂಡ ಜನರು ದೊಣ್ಣೆ, ಇಟ್ಟಿಗೆ, ಕಲ್ಲು, ಹರಿತವಾದ ಆಯುಧಗಳನ್ನು ಹಿಡಿದು ಓಡಿಸುತ್ತಾರೆ. ಮತ್ತೊಂದು ಫೋಟೋದಲ್ಲಿ ಹೆಣ್ಣು ಹುಲಿಯ ಕಣ್ಣಿನಿಂದ ರಕ್ತ ಸೋರುತ್ತಿರುವುದು ನೋಡಬಹುದು. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು 9 ಮಂದಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ