ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಏಕನಾಥ ಶಿಂಧೆ ಅವರು ಚುನಾವಣಾ ಫಲಿತಾಂಶ ಬಂದ ನಾಲ್ಕು ದಿನಗಳ ನಂತರ ತಮ್ಮ ನಿಲುವನ್ನು ಸಡಿಲಿಸಿದ್ದು, ಮುಖ್ಯಮಂತ್ರಿ ಆಯ್ಕೆಯ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದೇನೆ ಎಂದು ಮಹಾರಾಷ್ಟ್ರದ ಹಂಗಾಮಿ ಮುಖ್ಯಮಂತ್ರಿ ಏಕನಾಥ ಶಿಂಧೆ, ಬುಧವಾರ ಹೇಳಿದ್ದಾರೆ.
“ಪ್ರಧಾನಿ ಮೋದಿಯವರಿಗೆ ನಾನು ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದೇನೆ. ಅವರು ಏನೇ ನಿರ್ಧರಿಸಿದರೂ ನಾವು ಅದನ್ನು ಅನುಸರಿಸಿ ಹೋಗುತ್ತೇವೆ” ಎಂದು ಶಿಂಧೆ ಸುದ್ದಿಗಾರರಿಗೆ ತಿಳಿಸಿದರು. “ಯಾರೂ ಅಸಮಾಧಾನ ಹೊಂದಿಲ್ಲ” ಮತ್ತು ಅವರು “ಯಾವುದೇ ಸ್ಥಾನಕ್ಕಾಗಿ ದುರಾಸೆ ಹೊಂದಿಲ್ಲ” ಎಂದು ಅವರು ಒತ್ತಿ ಹೇಳಿದರು.
ನಾನು ಜನಪ್ರಿಯತೆಗಾಗಿ ಯಾವ ಕೆಲಸವನ್ನೂ ಮಾಡಲಿಲ್ಲ. ಜನರಿಗಾಗಿ ನಮ್ಮ ಸರ್ಕಾರ ಮಾಡಿದ ಕೆಲಸವೇ ನಮಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ನಾನು ಮತ್ತು ನಮ್ಮ ಸರ್ಕಾರದ ಉಪಮುಖ್ಯಮಂತ್ರಿಗಳು ದಿನದ 24 ಗಂಟೆಯೂ ಕೆಲಸ ಮಾಡಿದ್ದೇವೆ. ನನಗೆ ಯಾವುದೇ ಬೇಸರವಿಲ್ಲ. ನನಗೆ ಎರಡೂವರೆ ವರ್ಷದ ಆಡಳಿತದ ಬಗ್ಗೆ ತೃಪ್ತಿ ಇದೆ. ಮಹಾರಾಷ್ಟ್ರದಲ್ಲಿ ನಮ್ಮ ಸರ್ಕಾರದ ಗೆಲುವಿಗೆ ಬೆನ್ನೆಲುಬಾಗಿ ನಿಂತಿದ್ದು ಬಿಜೆಪಿ. ಹೀಗಾಗಿ, ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ನಿರ್ಧಾರವನ್ನು ನಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದೇವೆ. ಅವರು ಯಾವ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧರಿರುತ್ತೇವೆ ಎಂದು ಅವರು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹೆಚ್ಚು ಸ್ಥಾನಗಳ ಗೆಲುವಿನಿಂದಾಗಿ ಮುಖ್ಯಮಂತ್ರಿ ಹುದ್ದೆಗೆ ದೇವೇಂದ್ರ ಫಡ್ನವೀಸ್ ಹೆಸರು ಮುಂಚೂಣಿಯಲ್ಲಿದೆ. ಆದರೆ ಶಿಂಧೆಯವರ ಶಿವಸೇನೆ ಪಕ್ಷದ ಪ್ರತಿರೋಧದಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಎಂಬುದು ಇನ್ನೂ ಘೋಷಣೆಯಾಗಿಲ್ಲ.
ಶಿವಸೇನೆಯ ಏಕನಾಥ ಶಿಂಧೆಯವರ ಬಣವು ತನ್ನ ಮುಖ್ಯಸ್ಥರಿಗಾಗಿ ಎರಡನೇ ಬಾರಿಗೆ ಮುಖ್ಯಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತಿದೆ. ಇದು ಶಿಂಧೆ ಸರ್ಕಾರದ ಕಲ್ಯಾಣ ಯೋಜನೆಗಳಿಂದಾಗಿ ಮಹಾಯುತಿ ಮೈತ್ರಿಕೂಟವನ್ನು ಮರಳಿ ಅಧಿಕಾರಕ್ಕೆ ತರಲು ಕಾರಣವಾಗಿದೆ ಎಂದು ಹೇಳಿಕೊಂಡಿದೆ. ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿದರೂ ನಿತೀಶಕುಮಾರ ಪ್ರಬಲ ಪಾತ್ರ ವಹಿಸುವ ಬಿಹಾರದಂತೆ ಯಾಕೆ ಮಹಾರಾಷ್ಟ್ರವನ್ನು ನೋಡಬಾರದು ಎಂದು ಅವರ ಕೆಲವು ನಾಯಕರು ಬಹಿರಂಗವಾಗಿ ಹೇಳಿದ್ದಾರೆ.
2019 ರಲ್ಲಿ ಅವಿಭಜಿತ ಶಿವಸೇನೆಯ ನಾಯಕರು ಇದೇ ಹೇಳಿಕೆಯನ್ನು ನೀಡಿದ್ದರು, ಚುನಾವಣಾ ವಿಜಯದ ನಂತರ ಬಿಜೆಪಿ ಒಪ್ಪಂದದಿಂದ ಹಿಂದೆ ಸರಿದಿದೆ ಎಂದು ಹೇಳಿದ್ದರು. ನಂತರ ಉದ್ಧವ್ ಠಾಕ್ರೆ ನಂತರ ಬಿಜೆಪಿ ಜೊತೆಗಿನ ಮೈತ್ರಿಯಿಂದ ಹೊರಬಂದರು ಮತ್ತು ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಜೊತೆ ಕೈಜೋಡಿಸಿದರು.
ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದು, ಸರ್ಕಾರವನ್ನು ರಚಿಸಲು ಕೇವಲ ಒಂದು ಮಿತ್ರಪಕ್ಷದ ಬೆಂಬಲದ ಅಗತ್ಯವಿದೆ. ಮತ್ತು ಅಜಿತ್ ಪವಾರ್ ಅವರು ಈಗಾಗಲೇ ದೇವೆಂದ್ರ ಫಡ್ನವಿಸ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಅವರು ಭಾವನಾತ್ಮಕ ಧಾಟಿಯಲ್ಲಿ, ಶಿಂಧೆ ಅವರು ತಮ್ಮನ್ನು “ಸಾಮಾನ್ಯ ವ್ಯಕ್ತಿ” ಎಂದು ಕರೆದುಕೊಂಡಿದ್ದಾರೆ. ತಮ್ಮ ಗುರುತು ಯಾವುದೇ ಹುದ್ದೆಗಿಂತ ಮೇಲಿದೆ ಎಂದು ಹೇಳಿದರು. ‘ಮುಖ್ಯಮಂತ್ರಿಯಾದ ನಂತರ ಒಂದು ದಿನವೂ ಬಿಡುವು ನೀಡಿಲ್ಲ… ನಾನು ಅಳುವವನಲ್ಲ, ಹೋರಾಡುತ್ತೇನೆ.. ನನ್ನ ಕೊನೆಯ ಉಸಿರು ಇರುವವರೆಗೂ ಮಹಾರಾಷ್ಟ್ರಕ್ಕಾಗಿ ದುಡಿಯುತ್ತೇನೆ’ ಎಂದು ಅವರು ಹೇಳಿದರು.
288 ಸದಸ್ಯ ಬಲದ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಮಹಾಯುತಿ ಮೈತ್ರಿಕೂಟವಾದ ಬಿಜೆಪಿ 132, ಶಿವಸೇನೆ 57 ಮತ್ತು ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಸರಳ ಬಹುಮತಕ್ಕೆ ಬೇಕಾದ ಸಂಖ್ಯೆ 145 ಆಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ