
ಬೆಂಗಳೂರು: ವಾಯುಭಾರ ಕುಸಿತದಿಂದ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ʼಫೆಂಗಲ್ʼ ಚಂಡಮಾರುತದ ಪರಿಣಾಮ ತಮಿಳನಾಡಿನಲ್ಲಿ ಡಿಸೆಂಬರ್ 1ರವರೆಗೂ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ನವೆಂಬರ್ 29ರಂದು ಚಂಡಮಾರುತ ತೀರಕ್ಕೆ ಅಪ್ಪಳಿಸಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಬುಧವಾರವೂ ಭಾರಿ ಮಳೆ ಹಿನ್ನೆಲೆಯಲ್ಲಿ ತಮಿಳುನಾಡಿನ 9ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಗುರುವಾರವೂ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ತಿಳಿಸಿದೆ. ಆಂಧ್ರ ಪ್ರದೇಶದ ಕರಾವಳಿಗೂ ಚಂಡಮಾರುತದ ಪರಿಣಾಮ ಬೀರಲಿದ್ದು, ಭಾರಿ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ತಮಿಳುನಾಡಿಗೆ ಅಪ್ಪಳಿಸಲಿರುವ ಫೆಂಗಲ್ ಚಂಡಮಾರುತದ ಪರಿಣಾಮದಿಂದ ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಮುಂದಿನ ನಾಲ್ಕೈದು ದಿನಗ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಅಲ್ಲದೆ, ತಾಪಮಾನದಲ್ಲಿಯೂ 3-4 ಡಿಗ್ರಿ ಸೆಲ್ಸಿಯಸ್ ಕುಸಿತವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗುರುವಾರದಿಂದ ಒಂದು ವಾರ ಕೋಲಾರ ಜಿಲ್ಲೆಯ ಕೆಲ ಭಾಗಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 30 ಮತ್ತು ಡಿಸೆಂಬರ್ 1ರಂದು ಚಿಕ್ಕಮಗಳೂರು, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ. ಡಿಸೆಂಬರ್ 2 ರಿಂದ 4ರವರೆಗೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಹಾಗೂ ನವೆಂಬರ್ 30ರಿಂದ ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗ, ಕೊಡಗು, ಮೈಸೂರು, ಚಾಮರಾಜನಗರ, ಕೋಲಾರ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ನವೆಂಬರ್ 30ರ ನಂತರ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ. ನವೆಂಬರ್ 28ರಿಂದ ಒಂದು ವಾರ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ. ಉತ್ತರದ ಜಿಲ್ಲೆಗಳಲ್ಲಿ ತಾಪಮಾನವು ಕಡಿಮೆಯಾಗಬಹುದು ಎಂದು ತಿಳಿಸಿದೆ. ಬೆಂಗಳೂರಿನಲ್ಲಿ ಮೂರು ದಿನ ಜೋರಾದ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ