ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆಗಳಿಗೆ ಬೆಂಬಲ: ರವಾಂಡದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ನವದೆಹಲಿ: ಜಾಗತಿಕವಾಗಿ ನಿಷೇಧ ಆಗಿರುವ ಪಾಕಿಸ್ತಾನದ ಭಯೋತ್ಪಾದಕ ಗುಂಪು ಲಷ್ಕರ್ ಎ ತೊಯ್ಬಾ (ಎಲ್‌ಇಟಿ) ಸದಸ್ಯನಾದ ಸಲ್ಮಾನ್ ರೆಹಮಾನ್ ಖಾನ್ ಎಂಬಾತನನ್ನು ಪೂರ್ವ ಆಫ್ರಿಕಾದ ರುವಾಂಡದಲ್ಲಿ ಬಂಧಿಸಿ ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಈತ ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆಗಳಿಗೆ ಬೇಕಾದ ಶಸ್ತ್ರಾಸ್ತ್ರ ಮದ್ದುಗುಂಡು ಹಾಗೂ ಸ್ಪೋಟಕಗಳನ್ನು ಒದಗಿಸುವಲ್ಲಿ ಸಹಾಯ ಮಾಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎನ್‌ಐಎ ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿದಂತೆ ಈತನನ್ನು ಭಾರತಕ್ಕೆ ಕರೆತರಲು ಸಿಬಿಐ ಹಾಗೂ ಕಿಗಾಲಿಯ ಇಂಟರ್ ಪೋಲ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ ಜೊತೆ ಸಂಘಟಿತವಾಗಿ ಪ್ರಯತ್ನ ನಡೆಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ ಐ ಎ) ಈತನ ವಿರುದ್ಧ 2023 ರಲ್ಲಿ ಬೆಂಗಳೂರಿನ ಭಯೋತ್ಪಾದಕ ಚಟುವಟಿಕೆ ಹರಡುವ ಪ್ರಕರಣವನ್ನು ದಾಖಲಿಸಿತ್ತು. ಬೆಂಗಳೂರಿನಲ್ಲಿ ಭಯೋತ್ಪಾದನ ಚಟುವಟಿಕೆಗಳಿಗೆ ಸ್ಪೋಟಕಗಳನ್ನು ಸಂಗ್ರಹಿಸಲು ಮತ್ತು ಹಂಚಲು ನೆರವಾಗುತ್ತಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಈತ ಹಾಗೂ ಇತರ ಸಹಚರರ ವಿರುದ್ಧ ಕಳೆದ ವರ್ಷ ಜುಲೈ ತಿಂಗಳಲ್ಲಿ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಎನ್ಐಎ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ಆಗ ಪರಾರಿಯಾಗಿದ್ದ ರೆಹಮಾನ್ ಖಾನ್ ನ ಪತ್ತೆಗಾಗಿ ರೆಡ್ ಖಾರ್ನರ್ ನೋಟಿಸ್ ಜಾರಿ ಮಾಡುವಂತೆ ಸಿಬಿಐ ಗೆ ಎನ್‌ಐಎ ಮನವಿ ಸಲ್ಲಿಸಿತ್ತು. ನಂತರ ಜಾಗತಿಕ ತನಿಖಾ ಸಂಸ್ಥೆಗಳ ಮೂಲಕ ಆರೋಪಿಯ ಪತ್ತೆಗೆ ಅನುಕೂಲವಾಗುವಂತೆ ರೆಡ್ ಕಾರ್ನರ್ ನೋಟಿಸ್ ಜಾರಿಗೆ ಸಿಬಿಐ ಅಧಿಕಾರಿಗಳು ಇಂಟರ್‌ಪೋಲ್‌ಗೆ ಶಿಫಾರಸ್ಸು ಮಾಡಿದ್ದರು.
ಆರಂಭದಲ್ಲಿ ಪೋಕ್ಸೊ ಪ್ರಕರಣದಲ್ಲಿ ಈತ ಜೈಲುಪಾಲಾಗಿದ್ದ. ಬಳಿಕ ಇದೇ ವೇಳೆ ಭಯೋತ್ಪಾದನಾ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಟಿ ನಾಸಿರ್ ಎಂಬಾತನ ಜೊತೆ ಸೇರಿಕೊಂಡು ಭಯೋತ್ಪಾದಕ ಚಟುವಟಿಕೆಗಳಿಗೆ ನೆರವಾಗಿದ್ದ.ಪೋಕ್ಸೊ ಪ್ರಕರಣದ ಶಿಕ್ಷೆ ಮುಗಿಸಿ ಹೊರ ಬಂದ ಬಳಿಕ ಈತ ನಾಸಿರ್ ಅಣತಿಯಂತೆ ಸಹಚರರ ಸಹಾಯದ ಜೊತೆಗೆ ಈ ರೀತಿಯ ಕೃತ್ಯಗಳನ್ನು ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಪ್ರಮುಖ ಸುದ್ದಿ :-   ಶಾಸಕ ಸ್ಥಾನದಿಂದ ಅನರ್ಹಗೊಂಡ ಜನಾರ್ದನ ರೆಡ್ಡಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement