
ಬಾಂಗ್ಲಾದೇಶ ವಿರುದ್ಧದ U-19 ಏಷ್ಯಾಕಪ್ ಪಂದ್ಯದಲ್ಲಿ ನೇಪಾಳ ಕ್ರಿಕೆಟ್ ತಂಡದ ಬೌಲರ್ ಯುವರಾಜ ಖತ್ರಿ ಅವರು ವಿಕೆಟ್ ಪಡೆದ ಖುಚಿಯಲ್ಲಿ ಚಿತ್ರವಿಚಿತ್ರ ಸಂಭ್ರಮಾಚರಣೆ ಮಾಡಲು ಹೋಗಿ ಗಾಯಗೊಂಡು ಮೈದಾನದಿಂದ ನಿರ್ಗಮಿಸಬೇಕಾಯಿತು. ಇದರಿಂದಾಗಿ ಗೆಲ್ಲುವ ಸ್ಥಿತಿಯಲ್ಲಿದ್ದ ನೇಪಾಳ ಪಂದ್ಯವನ್ನೇ ಸೋಲಬೇಕಾಯಿತು.
ಪಂದ್ಯದಲ್ಲಿ ಯುವರಾಜ ಅವರು ನಾಲ್ಕು ವಿಕೆಟ್‌ಗಳನ್ನು ಪಡೆದು ಅದ್ಭುತ ಫಾರ್ಮ್‌ನಲ್ಲಿದ್ದರು ಆದರೆ ಅವರ ಸಂತೋಷವು ಶೀಘ್ರದಲ್ಲೇ ದುಃಖಕ್ಕೆ ತಿರುಗಿತು. ಏಕೆಂದರೆ ಅವರು ವಿಕೆಟ್ ಪಡೆದ ಸಂಭ್ರಮಾಚರಣೆ ವೇಳೆ ಗಾಯಗೊಂಡರು. ಪಂದ್ಯದಲ್ಲಿ, ಯುವರಾಜ ತನ್ನ ನಾಲ್ಕನೇ ವಿಕೆಟ್ ಪಡೆದ ನಂತರ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ರೀತಿ ಓಡಿ ಸಂಭ್ರಮಿಸುವುದನ್ನು ಅನುಕರಿಸಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ. ಇಮ್ರಾನ್ ತಾಹಿರ್ ರೀತಿ ಓಡಿ ಓಡುವಾಗ ಎಡಗಾಲು ತಿರುಚಿ ನೆಲಕ್ಕೆ ಬಿದ್ದರು. ಆವರನ್ನು ಸಹ ಆಟಗಾರರು ಮೈದಾನದಿಂದ ಹೊರಗೆ ಕರೆದೊಯ್ಯಬೇಕಾಯಿತು. ಸೋಲುವ ಭೀತಿಯಲ್ಲಿದ್ದ ಬಾಂಗ್ಲಾದೇಶ ಐದು ವಿಕೆಟ್‌ಗಳು ಬಾಕಿ ಇರುವಂತೆಯೇ ಗುರಿಯನ್ನು ಬೆನ್ನಟ್ಟಿದ ಕಾರಣ ನೇಪಾಳ ಪಂದ್ಯವನ್ನು ಕಳೆದುಕೊಂಡಿತು.

ಪಂದ್ಯದಲ್ಲಿ ಅವರು ಇದಕ್ಕು ಮೊದಲಿನ ವಿಕೆಟ್ ಪಡೆದಾಗ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ತಬ್ರೈಜ್ ಶಮ್ಸಿ ಅವರ ʼಶೂʼ ಸಂಭ್ರಮಾಚರಣೆಯನ್ನು ಅನುಕರಿಸಿದ್ದರು.
ಒಟ್ಟು 6 ಓವರ್ ಬೌಲಿಂಗ್ ನಡೆಸಿದ್ದ ಯುವರಾಜ್ ಕೇವಲ 23 ರನ್ ನೀಡಿ ಬಾಂಗ್ಲಾದೇಶದ 4 ವಿಕೆಟ್ ಕಬಳಿಸಿದ್ದರು. ಅವರಿಗೆ ಇನ್ನೂ ನಾಲ್ಕು ಓವರ್ ಕೋಟಾ ಬಾಕಿಯಿತ್ತು. ಆದರೆ ಗಾಯಗೊಂಡು ಪಂದ್ಯದಿಂದ ಹೊರ ನಡೆದ ಕಾರಣ ನೇಪಾಳ ತಂಡ 5 ವಿಕೆಟ್‌ಗಳ ಸೋಲಬೇಕಾಯಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನೇಪಾಳ 45.4 ಓವರ್‌ಗಳಲ್ಲಿ ಕೇವಲ 141 ರನ್‌ಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಆರಂಭಿಕ ಆಘಾತದ ಹೊರತಾಗಿಯೂ 28.4 ಓವರ್‌ಗಳಲ್ಲಿ 5 ವಿಕೆಟ್‌ಗೆ 142 ರನ್ ಬಾರಿಸಿ ಪಂದ್ಯದಲ್ಲಿ ಜಯಗಳಿಸಿತು.
ಈ ರೀತಿ ವಿಕೆಟ್ ಪಡೆದ ನಂತರ ಸಂಭ್ರಮಾಚರಣೆ ವೇಳೆ ಗಾಯಗೊಂಡವರು ಖತ್ರಿ ಮಾತ್ರವೇ ಅಲ್ಲ. ಇನ್ನೂ ಕೆಲವರಿದ್ದಾರೆ. ಪ್ರಸ್ತುತ ಶೆಫೀಲ್ಡ್ ಶೀಲ್ಡ್‌ನಲ್ಲಿ ಆಡುತ್ತಿರುವ ಆಸ್ಟ್ರೇಲಿಯಾದ ವೇಗಿ ಜ್ಯೆ ರಿಚರ್ಡ್‌ಸನ್ ಕೂಡ ವಿಕೆಟ್ ಪಡೆದು ಸಂಭ್ರಮಿಸುವಾಗ ಭುಜದ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು.
ನವೆಂಬರ್‌ನಲ್ಲಿ ದಕ್ಷಿಣ ಆಸ್ಟ್ರೇಲಿಯಾ ವಿರುದ್ಧ ಪಶ್ಚಿಮ ಆಸ್ಟ್ರೇಲಿಯಾದ ಪಂದ್ಯದಲ್ಲಿ ಈ ಘಟನೆ ಸಂಭವಿಸಿದೆ. ಪಂದ್ಯದಲ್ಲಿ ಜ್ಯೆ ರಿಚರ್ಡ್‌ಸನ್ (Jhye Richardson) ತನ್ನ ಆರಂಭಿಕ ಓವರ್‌ನಲ್ಲಿ ಬ್ಯಾಕ್-ಟು-ಬ್ಯಾಕ್ ವಿಕೆಟ್‌ಗಳನ್ನು ಪಡೆದರು, ದಕ್ಷಿಣ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಕಾನರ್ ಮ್ಯಾಕ್‌ನೆರ್ನಿ ಮತ್ತು ಸತತ ಎಸೆತಗಳಲ್ಲಿ ನಂ.3 ಡೇನಿಯಲ್ ಡ್ರೂ ಅವರನ್ನು ಔಟ್ ಮಾಡಿದ್ದರು. ನಂತರ ಸಂಭ್ರಮಿಸುವಾಗ ಗಾಯಗೊಂಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ