ಬೆಂಗಳೂರು : ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ತನಿಖೆಯ ನೆಪದಲ್ಲಿ ಸಿಐಡಿ ಪೊಲೀಸರು ನೀಡಿದ ಕಿರುಕುಳದಿಂದ ಮನನೊಂದು ವಕೀಲೆ ಎಸ್ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪಿತ ಪ್ರಕರಣದ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್ ಬುಧವಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಹಾಗೂ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಗಡುವು ನೀಡಿದೆ.
ಉದ್ಯಮಿ ಹಾಗೂ ವಕೀಲೆ ಜೀವಾ ಆತ್ಮಹತ್ಯೆ ಪ್ರಕಣದ ತನಿಖೆಯನ್ನು ಸಿಬಿಐಗೆ (CBI) ವಹಿಸುವಂತೆ ಕೋರಿ ಬೆಂಗಳೂರು ವಕೀಲರ ಸಂಘ ಅರ್ಜಿ ಸಲ್ಲಿಸಿತ್ತು. ಸಿಬಿಐ ತನಿಖೆ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಎಸ್‌ಐಟಿ ರಚಿಸಿ ಆದೇಶ ಹೊರಡಿಸಿತು.
“ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಬೆಂಗಳೂರು ಸಿಬಿಐನ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ವರ್ಮಾ ನೇತೃತ್ವದ ಮೂರು ಅಧಿಕಾರಿಗಳ ವಿಶೇಷ ತನಿಖಾ ತಂಡ ನಡೆಸಲಿದೆ. ಕರ್ನಾಟಕ ಹೋಮ್ ಗಾರ್ಡ್‌ನ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಅಕ್ಷಯ ಮಚೀಂದ್ರ ಹಾಕೆ, ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು ಎಸ್‌ಐಟಿಯ ಇತರ ಸದ್ಯಸರಾಗಿ ಇರಲಿದ್ದಾರೆ” ಎಂದು ನ್ಯಾಯಾಲಯ ಆದೇಶಿಸಿದೆ.
“ಕನಕಲಕ್ಷ್ಮಿ ಅವರು ಭೋವಿ ಹಗರಣದ ಪ್ರಕರಣದ ಆರೋಪಿಯೊಬ್ಬರಿಂದ 25 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಬೇರಾವುದೇ ದಾಖಲೆಯಿಲ್ಲ. ಬಿಎನ್‌ಎಸ್ ಸೆಕ್ಷನ್ 108 (ಐಪಿಸಿ ಸೆಕ್ಷನ್ 306) ಅಡಿ ಎಸ್‌ಐಟಿ ತನಿಖೆ ಮಾಡುವಾಗ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಚಾರ ಗಮನಕ್ಕೆ ಬಂದರೆ ಭ್ರಷ್ಟಾಚಾರ ಪ್ರತಿಬಂಧ ಕಾಯಿದೆ ಸೆಕ್ಷನ್ 17ಎ ಅಡಿ ಕಾನೂನಿನ ಅನ್ವಯ ತನಿಖೆ ನಡೆಸಬೇಕು” ಎಂದೂ ನ್ಯಾಯಾಲಯವು ಆದೇಶಿಸಿದೆ.
“ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ತಕ್ಷಣ ಎಸ್‌ಐಟಿ ಆರಂಭಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಬಂಧಿತ ಅಧಿಕಾರಿಗಳು ಎಸ್‌ಐಟಿಗೆ ಒದಗಿಸಬೇಕು. ಅಗತ್ಯಬಿದ್ದರೆ ಇತರೆ ಪೊಲೀಸ್ ಅಧಿಕಾರಿಗಳ ನೆರವನ್ನು ಎಸ್‌ಐಟಿ ಪಡೆಯಬಹುದು. ತನಿಖೆ ಆರಂಭವಾದಗಿನಿಂದ ಮೂರು ತಿಂಗಳಲ್ಲಿ ತನಿಖೆ ಮುಗಿಯಬೇಕು. ತನಿಖಾ ವರದಿಯನ್ನು ಮೂರು ತಿಂಗಳು ಅಥವಾ ಅದರ ಒಳಗೆ ಈ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಎಸ್‌ಐಟಿಗೆ ಅಗತ್ಯವಾದ ಕಚೇರಿ ಮತ್ತಿತರ ಸೌಲಭ್ಯವನ್ನು ರಾಜ್ಯ ಸರ್ಕಾರ ಒದಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಭೋವಿ ನಿಗಮದ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿನ ಮಧ್ಯಂತರ ಆದೇಶ ಮುಂದುವರಿಯಲಿದೆ. ಅವುಗಳ ವಿಚಾರಣೆಯನ್ನು ಡಿಸೆಂಬರ್ 19ಕ್ಕೆ ನಡೆಸಲಾಗುವುದು ಎಂದು ಆದೇಶದಲ್ಲಿ ಹೇಳಿದೆ.
ಭೋವಿ ನಿಗಮದಲ್ಲಿ ಒಟ್ಟು 34 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ. ಭೋವಿ ನಿಗಮ ಅಕ್ರಮ ಸಂಬಂಧ ಜೀವಾ ಅವರನ್ನು ಸಿಐಡಿ ವಿಚಾರಣೆಗೆ ಒಳಪಡಿಸಿತ್ತು. ಆದರೆ ಕಿರುಕುಳದ ಆರೋಪ ಮಾಡಿ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ