ಹೈದರಾಬಾದ್ : ಬುಧವಾರ (ಡಿಸೆಂಬರ್ ೪) ಸಂಜೆ ಹೈದರಾಬಾದ್‌ನ ಥಿಯೇಟರ್‌ನಲ್ಲಿ ‘ಪುಷ್ಪಾ 2: ದಿ ರೂಲ್’ ಚಿತ್ರದ ಪ್ರಥಮ ಪ್ರದರ್ಶನದ ವೇಳೆ 35 ವರ್ಷದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ ಮತ್ತು ಅವರ ಒಂಬತ್ತು ವರ್ಷದ ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಈ ಘಟನೆ ನಡೆದಿದ್ದು, ಚಿತ್ರದ ನಾಯಕ ನಟ ಅಲ್ಲು ಅರ್ಜುನ್ ಅವರನ್ನು ನೋಡಲು ಭಾರಿ ಜನಸ್ತೋಮ ನೆರೆದಿತ್ತು. ಈ ವೇಳೆ ಕಾಲ್ತುಳಿತದಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ದಿಲ್‌ಸುಖ್‌ನಗರದ ನಿವಾಸಿ ರೇವತಿ (39) ಎಂಬ ಮಹಿಳೆ ತನ್ನ ಪತಿ ಭಾಸ್ಕರ ಮತ್ತು ಇಬ್ಬರು ಮಕ್ಕಳಾದ ಶ್ರೀತೇಜ (9) ಮತ್ತು ಸಾನ್ವಿಕಾ (7) ಅವರೊಂದಿಗೆ ಪುಷ್ಪ 2 ರ ಪ್ರೀಮಿಯರ್ ಶೋ ವೀಕ್ಷಿಸಲು ಆರ್‌ಟಿಸಿ ಕ್ರಾಸ್ ರಸ್ತೆಯಲ್ಲಿರುವ ಸಂಧ್ಯಾ 70 ಎಂಎಂ ಥಿಯೇಟರ್‌ಗೆ ಹೋಗಿದ್ದರು.
ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ ಅವರೊಂದಿಗೆ ಪ್ರದರ್ಶನಕ್ಕೆ ಆಗಮಿಸಿದ್ದ ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಾಗ ಚಿತ್ರಮಂದಿರದ ಹೊರಗೆ ಗೊಂದಲದ ವಾತಾವರಣ ಉಂಟಾಯಿತು. ಪೊಲೀಸರ ಪ್ರಕಾರ, ಪ್ರೇಕ್ಷಕರ ನೂಕು-ನುಗ್ಗಾಟಕ್ಕೆ ಥಿಯೇಟರ್‌ನ ಮುಖ್ಯ ಗೇಟ್ ಕುಸಿದುಬಿದ್ದಿದೆ. ಸಿನಿಮಾ ಥಿಯೇಟರ್ ತನ್ನ ಸಾಮರ್ಥ್ಯಕ್ಕೂ ಮೀರಿದ ಜನರಿಂದ ತುಂಬಿದ್ದು ಉಸಿರುಗಟ್ಟುವಿಕೆಗೆ ಕಾರಣವಾಯಿತು ಎನ್ನಲಾಗಿದೆ.ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಜನರನ್ನು ಚದುರಿಸುವ ಪ್ರಯತ್ನಗಳ ಹೊರತಾಗಿಯೂ, ಜನರ ನೂಕು-ನುಗ್ಗಾಟದಲ್ಲಿ ಕಾಲ್ತುಳಿತವು ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ಪ್ರಕಾರ, ಚಿತ್ರ ವೀಕ್ಷಿಸಲು ಮಾತ್ರವಲ್ಲದೆ ನಟ ಹಾಗೂ ಚಿತ್ರದ ನಿರ್ಮಾಣ ತಂಡದ ಸದಸ್ಯರನ್ನು ನೋಡಲು ಸಹ ಸಾವಿರಾರು ಜನರು ಥಿಯೇಟರ್‌ನಲ್ಲಿ ಜಮಾಯಿಸಿದ್ದರು.
ಸುಕುಮಾರ್ ನಿರ್ದೇಶನದ ‘ಪುಷ್ಪ 2: ದಿ ರೂಲ್’ 2021 ರ ಬ್ಲಾಕ್‌ಬಸ್ಟರ್ ‘ಪುಷ್ಪ: ದಿ ರೈಸ್’ ನ ಮುಂದುವರಿದ ಭಾಗವಾಗಿದೆ ಮತ್ತು ಬಹು ಭಾಷೆಗಳಲ್ಲಿ 10,000 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. 2D ಮತ್ತು 4DX ಫಾರ್ಮ್ಯಾಟ್‌ಗಳಲ್ಲಿ ಪ್ರದರ್ಶನಗಳನ್ನು ಚಿಂತಿಸಲಾಗಿದ್ದರೂ, ಪೋಸ್ಟ್-ಪ್ರೊಡಕ್ಷನ್‌ನಲ್ಲಿನ ವಿಳಂಬದಿಂದಾಗಿ 3D ಆವೃತ್ತಿಯ ಯೋಜನೆಗಳನ್ನು ರದ್ದುಗೊಳಿಸಲಾಗಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ