
ಮುಂಬೈ: ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ನೂತನ ಚುನಾಯಿತ ಶಾಸಕರು ಇಂದು, ಶನಿವಾರ(ಡಿಸೆಂಬರ್ 7) ನಡೆದ ಮಹಾರಾಷ್ಟ್ರ ವಿಧಾನಸಭೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಾಕ್‌ಔಟ್ ಮಾಡಿದ್ದಾರೆ.
ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ದುರ್ಬಳಕೆಯಿಂದ ಆಡಳಿತಾರೂಢ ಮಹಾಯುತಿ ಒಕ್ಕೂಟದ ಗೆಲುವು ಸಾಧಿಸಿದೆ ಎಂದು ಆರೋಪಿಸಿ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದಾರೆ. ಆದಾಗ್ಯೂ, ವಿಪಕ್ಷಗಳ ನಾಯಕರ ಕರೆಯನ್ನು ಧಿಕ್ಕರಿಸಿ, ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಅಬು ಅಸಿಮ್ ಅಜ್ಮಿ ಮತ್ತು ಪಕ್ಷದ ನಾಯಕ ರೈಸ್ ಶೇಖ್ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದರು.
ಶನಿವಾರ ಆರಂಭವಾದ 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಮೂರು ದಿನಗಳ ಅಧಿವೇಶನದ ಮಧ್ಯೆ ಇದು ನಡೆದಿದೆ. ಹಂಗಾಮಿ ಸ್ಪೀಕರ್ ಕಾಳಿದಾಸ ಕೊಳಂಬ್ಕರ್ ಅವರ ಮೇಲ್ವಿಚಾರಣೆಯ ಅಧಿವೇಶನದಲ್ಲಿ ಶಾಸಕರಿಗೆ ಪ್ರಮಾಣವಚನ, ವಿಧಾನಸಭಾ ಸ್ಪೀಕರ್ ಆಯ್ಕೆ, ಹೊಸ ಸರ್ಕಾರದ ವಿಶ್ವಾಸ ಮತ ಮತ್ತು ರಾಜ್ಯಪಾಲರ ಭಾಷಣ ಸೇರಿವೆ. ಬಿಜೆಪಿಯ ಹಿರಿಯ ಶಾಸಕ ಕೊಳಂಬ್ಕರ್ ಅವರನ್ನು ಶುಕ್ರವಾರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಬಳಿ ಎಂವಿಎ (MVA) ನಾಯಕರು ತಮ್ಮ ನಿಲುವಿನ ಬಗ್ಗೆ ವಿವರಿಸಲು ಜಮಾಯಿಸಿದರು.
ಎಲೆಕ್ಟ್ರಾನಿಕ್ ಮತ ಯಂತ್ರ (ಇವಿಎಂ) ಬಳಕೆಯಿಂದ ಪ್ರಜಾಪ್ರಭುತ್ವದ ಕೊಲೆಯಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಹಿಷ್ಕರಿಸಿದ್ದೇವೆ. ಇದು (ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ) ಸಾರ್ವಜನಿಕರ ಆದೇಶವಲ್ಲ, ಇದು ಇವಿಎಂ ಮತ್ತು ಭಾರತದ ಚುನಾವಣಾ ಆಯೋಗದ ಆದೇಶವಾಗಿದೆ ಎಂದು ಉದ್ಧವ್ ಠಾಕ್ರೆ ಹೇಳಿದರು.
ಕಾಂಗ್ರೆಸ್‌ನ ನಾನಾ ಪಟೋಲೆ ಮತ್ತು ಎನ್‌ಸಿಪಿಯ ಜಿತೇಂದ್ರ ಅವ್ಹಾದ್ ಸೇರಿದಂತೆ ಇತರ ಹಿರಿಯ ವಿಪಕ್ಷದ ನಾಯಕರು ಕಳವಳ ವ್ಯಕ್ತಪಡಿಸಿದರು ಮತ್ತು ಇವಿಎಂಗಳ ಬದಲಿಗೆ ಬ್ಯಾಲೆಟ್ ಪೇಪರ್‌ಗಳನ್ನು ಬಳಸಿ ಚುನಾವಣೆಗಳನ್ನು ನಡೆಸಬೇಕೆಂಬ ಬೇಡಿಕೆಗಳನ್ನು ಪುನರುಚ್ಚರಿಸಿದರು. “ಇಡೀ ಪ್ರಕ್ರಿಯೆಯು ಕಳಂಕಿತವಾಗಿದೆ. ಜನರು ಅತೃಪ್ತಿ ಹೊಂದಿದ್ದಾರೆ ಮತ್ತು ಏನೋ ತಪ್ಪಾಗಿದೆ” ಎಂದು ಕಾಂಗ್ರೆಸ್ ಶಾಸಕ ವಿಜಯ ವಾಡೆಟ್ಟಿವಾರ್ ಆರೋಪಿಸಿದ್ದಾರೆ.
ನವೆಂಬರ್ 20ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಏಕನಾಥ ಶಿಂಧೆ ಅವರ ಶಿವಸೇನೆ ಬಣ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಬಣವನ್ನು ಒಳಗೊಂಡಿರುವ ಮಹಾಯುತಿ ಮೈತ್ರಿಕೂಟವು 288 ವಿಧಾನಸಭಾ ಸ್ಥಾನಗಳ ಪೈಕಿ 230 ಸ್ಥಾನಗಳನ್ನು ಗೆದ್ದಿದೆ. ಇದರ ನಂತರ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಏಕನಾಥ ಶಿಂಧೆ ಮತ್ತು ಅಜಿತ ಪವಾರ್ ಅವರು ಡಿಸೆಂಬರ್ 5 ರಂದು ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.
ವಿಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ ಪವಾರ್, ಸಾಕ್ಷ್ಯಾಧಾರಗಳಿದ್ದರೆ ವಿಪಕ್ಷದವರು ಚುನಾವಣಾ ಆಯೋಗ ಅಥವಾ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದರು. ಇಲ್ಲಿ ಇಂತಹ ಆರೋಪ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ,ವಿಪಕ್ಷಗಳು ಚುನಾವಣಾ ಆಯೋಗದ ಮೊರೆ ಹೋಗಬೇಕು, ಅಲ್ಲಿಯೂ ನ್ಯಾಯ ಸಿಗದಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕು ಎಂದರು.
ಬುಧವಾರ ಮುಂಬೈನ ಆಜಾದ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರು ಮತ್ತು ಎನ್‌ಡಿಎ ರಾಜ್ಯ ನಾಯಕರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದ ಮಹಾಯುತಿಯ ಭವ್ಯವಾದ ಪ್ರಮಾಣ ವಚನ ಸಮಾರಂಭದಿಂದಲೂ ವಿಪಕ್ಷ ಶಾಸಕರು ನಿರ್ಗಮಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ