
ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)ದ ನೂತನ ಗವರ್ನರ್ ಆಗಿ ಕಂದಾಯ ಕಾರ್ಯದರ್ಶಿ ಸಂಜಯ ಮಲ್ಹೋತ್ರಾ (Sanjay Malhotra) ಅವರು ಸೋಮವಾರ ನೇಮಕವಾಗಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಗೆ ಅವರು ಆರ್‌ಬಿಐ ಗವರ್ನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಡಿಸೆಂಬರ್ 11ರಂದು ಅವರು ಬುಧವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಹಾಲಿ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿ ಡಿಸೆಂಬರ್ 10ಕ್ಕೆ ಮುಕ್ತಾಯವಾಗಲಿದೆ. ಸಂಜಯ ಮಲ್ಹೋತ್ರಾ ಅವರು ಆರ್‌ಬಿಐನ 26ನೇ ಗವರ್ನರ್ ಆಗಲಿದ್ದಾರೆ.
ಸಂಜಯ ಮಲ್ಹೋತ್ರಾ ಅವರು ರಾಜಸ್ಥಾನ ಮೂಲದ 1990ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಕಾನ್ಪುರದ ಐಐಟಿಯಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಗಳಿಸಿದ್ದಾರೆ. ಅಮೆರಿಕದಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಐಎಎಸ್ ಅಧಿಕಾರಿಯಾಗಿ ಸಂಜಯ ಮಲ್ಹೋತ್ರಾ ಅವರು, ವಿದ್ಯುತ್, ಹಣಕಾಸು, ತೆರಿಗೆ, ಮಾಹಿತಿ ತಂತ್ರಜ್ಞಾನ, ಗಣಿಗಾರಿಕೆ ಸೇರಿದಂತೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಹಣಕಾಸು ಸಚಿವಾಲಯದಲ್ಲಿ ಕಂದಾಯ ಕಾರ್ಯದರ್ಶಿಯಾಗುವುದಕ್ಕೆ ಮುನ್ನ ಹಣಕಾಸು ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು. ರಾಜ್ಯ ಮತ್ತು ಕೇಂದ್ರದಲ್ಲಿ ಹಣಕಾಸು ಮತ್ತು ತೆರಿಗೆ ಆಡಳಿತದಲ್ಲಿ ಅನುಭವ ಹೊಂದಿದ್ದಾರೆ. ನೇರ ಮತ್ತು ಪರೋಕ್ಷ ತೆರಿಗೆಗೆಳ ಸುಧಾರಣೆಯಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಕಳೆದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ದೇಶದ ಜಿಡಿಪಿ ಬೆಳವಣಿಗೆ ಇಳಿಕೆಯಾಗಿರುವುದರಿಂದ ಬೆಳವಣಿಗೆಗೆ ಒತ್ತು ನೀಡಬೇಕಾಗಿದೆ. ಜತೆಗೆ ಹಣದುಬ್ಬರವನ್ನೂ ನಿಯಂತ್ರಿಸಬೇಕಾಗಿದೆ. ಈ ಎರಡು ಗುರಿಗಳನ್ನು ಆರ್‌ಬಿಐ ಗವರ್ನರ್ ಆಗಿ ಸಂಜಯ ಮಲ್ಹೋತ್ರಾ ಹೇಗೆ ನಿರ್ವಹಿಸಬೇಕಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ